ಅಂಕೋಲಾದಲ್ಲಿ ಕಳ್ಳತನ, ಮುಂಡಗೋಡದಲ್ಲಿ ಗಾಂಜಾ ಮಾರಾಟ ಹಾಗೂ ಹಾನಗಲ್’ದಲ್ಲಿ ದರೋಡೆ ಮಾಡಿ ಶಿರಸಿಯ ದಾಸನಕೊಪ್ಪಕ್ಕೆ ಬಂದು ವಾಸವಾಗಿದ್ದ ಹಾವೇರಿ ನವನಗರದ ಇಮ್ರಾನ್ ಅಹ್ಮದ್ ಈಗಲೂ ಸುಧಾರಣೆ ಕಂಡಿಲ್ಲ. ಶಿರಸಿಯಲ್ಲಿಯೂ ಸಹ ಅವರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಕಿಸಿಕೊಂಡಿದ್ದು, ಪೊಲೀಸರು ಇಮ್ರಾನ್ ಅಹ್ಮದ್ ಅವರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ.
ಹಾವೇರಿ ನವನಗರದಲ್ಲಿ ಇಮ್ರಾನ್ ಅಹ್ಮದ್ ಮಕ್ಬುಲ್ ಅಹ್ಮದ್ ಬ್ಯಾಡಗಿ ಅವರು ವಾಸವಾಗಿದ್ದರು. ಆಗಾಗ, ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದ ಅವರು ಗಾಂಜಾ ತರುತ್ತಿದ್ದರು. ಗಾಂಜಾ ಮಾರಾಟದ ಜೊತೆಗೆ ಅಲ್ಲಲ್ಲಿ ಕಳ್ಳತನ, ದರೋಡೆಗೂ ಕೈ ಹಾಕುತ್ತದ್ದರು. ದುಡಿದು ತಿನ್ನುವ ಬದಲು ಹೊಡೆದು ತಿನ್ನುವುದೇ ಅವರಿಗೆ ರೂಢಿಯಾಗಿತ್ತು. ಅಂಕೋಲಾದ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಇಮ್ರಾನ್ ಅಹ್ಮದ್ ಅವರು ಆರೋಪಿಯಾಗಿದ್ದರು. ಮುಂಡಗೋಡದಲ್ಲಿ ಗಾಂಜಾ ಮಾರಾಟ ಮಾಡುವಾಗಲೂ ಸಿಕ್ಕಿ ಬಿದ್ದಿದ್ದರು. ಹಾನಗಲ್’ನಲ್ಲಿ ದರೋಡೆ ನಡೆಸಿ ನಂತರ ಶಿರಸಿಯ ದಾಸನಕೊಪ್ಪಕ್ಕೆ ಬಂದು ವಾಸವಾಗಿದ್ದರು.
ಐ 10 ಕಾರಿನಲ್ಲಿ ಗಾಂಜಾ ಸಾಗಿಸಿ, ಮಾರಾಟ ಮಾಡುತ್ತಿದ್ದ ಇಮ್ರಾನ್ ಅಹ್ಮದ್ ಅವರ ಚಟುವಟಿಕೆಗಳ ಮೇಲೆ ಶಿರಸಿ ಪಿಐ ಸಂಪತ್ ಈಸಿ ಅವರು ಕಣ್ಣಿಟ್ಟಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ ಅವರಲ್ಲಿಯೂ ಇಮ್ರಾನ್ ಅಹ್ಮದ್ ಅವರ ಬಗ್ಗೆ ಹೇಳಿದ್ದರು. ಪಿಸೈ ನರಸಿಂಹಲು, ನಾರಾಯಣ ರಾಥೋಡ್ ಅವರ ಮೂಲಕ ಆರೋಪಿ ಮೇಲೆ ನಿಗಾವಿರಿಸಿದ್ದರು. ಜುಲೈ 14ರ ಸಂಜೆ ಇಮ್ರಾನ್ ಅಹ್ಮದ್ ಮಕ್ಬುಲ್ ಅಹ್ಮದ್ ಬ್ಯಾಡಗಿ ಅವರು ಬನವಾಸಿ ರಸ್ತೆಯ ಹಾರ್ಟಿಕಲ್ಚರಲ್ ಕಾಲೇಜು ಬಳಿ ನಿಂತಿದ್ದರು. ಅವರ ಕಾರಿನಲ್ಲಿ ಗಾಂಜಾವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ರಾಮಯ್ಯ ಪೂಜಾರಿ, ಹನುಮಂತ ಮಕಾಪುರ, ಸದ್ದಾಂ ಹುಸೇನ್, ಹನುಮಂತ ಕಬಾಡಿ, ತುಕಾರಾಮ ಬಣಗಾರ, ಸುನೀಲ, ಪ್ರಶಾಂತ, ರಾಜಶೇಖರ್ ಸೇರಿ ಅವರನ್ನು ಸಾಕ್ಷಿಸಹಿತ ಹಿಡಿದರು.