ದುಡಿದು ತಿನ್ನುವ ವಯಸ್ಸಿನಲ್ಲಿ ಅಡ್ಡದಾರಿಹಿಡಿದು ದುಡ್ಡು ಮಾಡಲು ಆಸಕ್ತಿವಹಿಸಿದ ಹಳಿಯಾಳದ ಸಂದೀಪ್ ಶೋಲಂಬಿ ಅವರು ಖೋಟಾ ನೋಟು ತಯಾರಿಸುವ ದಂಧೆ ಶುರು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅವರು ಬಾಡಿಗೆ ಮನೆ ಮಾಡಿಕೊಂಡಿದ್ದು, ಅಲ್ಲಿಯೇ 500ರೂಪಾಯಿಯ ನೋಟುಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಹಳಿಯಾಳದಲ್ಲಿ ವಾಸವಾಗಿದ್ದ ಸಂದೀಪ್ ಪುಂಡಲೀಕ ಶೋಲಂಬಿ ಅವರು ಸಣ್ಣ ವಯಸ್ಸಿನಲ್ಲಿಯೇ ದುಷ್ಟಕೂಟದ ಸದಸ್ಯರಾದರು. 30 ವರ್ಷದ ಅವರು ಕಾಸರಗೋಡು, ಪುತ್ತೂರು, ಬೆಳ್ತಂಗಡಿ ಮೂಲದ ಸಹಚರರ ಜೊತೆ ಸೇರಿ ನೋಟು ಮುದ್ರಿಸುವ ಕೆಲಸ ಶುರು ಮಾಡಿದರು. ಖೋಟಾ ನೋಟುಗಳನ್ನು ಮುದ್ರಿಸಿ ಅದನ್ನು ಅಸಲಿ ನೋಟುಗಳ ಜೊತೆ ಸೇರಿಸಿ ಕೊಡುವ ಚಿಂತನೆ ನಡೆಸಿದ್ದರು. ಸದ್ಯ ದಕ್ಷಿಣ ಕನ್ನಡ ಪೊಲೀಸರು ಆ ಅಡ್ಡೆಯ ಮೇಲೆ ದಾಳಿ ಮಾಡಿ ಅವರ ಬಳಿಯಿದ್ದ ನೋಟುಗಳನ್ನು ಜಪ್ತು ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅರುಣ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿತರೆಲ್ಲರೂ ಒಂದು ತಿಂಗಳಿನಿAದ ಬಾಡಿಗೆ ಮನೆಯಲ್ಲೇ ಕಂಪ್ಯೂಟರ್, ಫೋಟೋಕಾಪಿಯರ್, ಸೀಲುಗಳು ಮತ್ತು ಸೆಕ್ಯುರಿಟಿ ಥ್ರೆಡ್ ಬಳಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಈ ನೋಟುಗಳು ಮಾರುಕಟ್ಟೆಗೆ ಬರುವ ಮುನ್ನ ಪೊಲೀಸರು ದಾಳಿ ಮಾಡಿದ್ದಾರೆ. `ವ್ಯಾಪಾರಸ್ಥರು, ಬ್ಯಾಂಕ್ ಗ್ರಾಹಕರು ಮತ್ತು ಸಾರ್ವಜನಿಕರು 500ರೂ ಮುಖಬೆಲೆಯ ನೋಟುಗಳನ್ನು ಪಡೆಯುವಾಗ ಅತ್ಯಂತ ಜಾಗರೂಕರಾಗಿರಬೇಕು’ ಎಂದು ಪೊಲೀಸರು ಎಚ್ಚರಿಸಿದ್ದಾರೆ.