ಅಚವೆ ಬಳಿಯ ಚೇತನ ನಾಯಕ ಹಾಗೂ ಲತೀಶ ನಾಯಕ ಸೇರಿ ಸರಾಯಿ ಅಂಗಡಿ ಶುರು ಮಾಡಿದ್ದು, ಪೊಲೀಸರು ಅದಕ್ಕೆ ಅಡ್ಡಗಾಲು ಹಾಕಿದ್ದಾರೆ. ಅನುಮತಿ ಇಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅವರಿಬ್ಬರ ವಿರುದ್ಧ ಪಿಸೈ ಗುರುನಾಥ ಹಾದಿಮನಿ ಅವರು ಕಠಿಣ ಕ್ರಮ ಜರುಗಿಸಿದ್ದಾರೆ.
ಅಂಕೋಲಾದ ಅಚವೆಯ ಮಾಬಿಗಿಯ ಚೇತನ ಶಿವಾನಂದ ನಾಯಕ (23) ಹಾಗೂ ಕುಂಟಕಣಿಯ ಲತೀಶ ನಾರಾಯಣ ನಾಯಕ (30) ಅವರು ಕಿರಾಣಿ ಅಂಗಡಿ ನಡೆಸುತ್ತಾರೆ. ಅದರಿಂದ ಬರುವ ಆದಾಯದಿಂದ ತೃಪ್ತರಾಗದ ಅವರು ಸರಾಯಿ ಮಾರಾಟ ಶುರು ಮಾಡಿದ್ದಾರೆ. ಕುಂಟಕಣಿ ಕ್ರಾಸ್ ಬಳಿ ರಾಶಿ ರಾಶಿ ಬಾಟಲಿ ತಂದು ಮಾರಾಟ ಮಾಡುತ್ತಿದ್ದ ಅವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಈ ವೇಳೆ ಅಲ್ಲಿ 11 ಬಗೆಯ ಮದ್ಯದ ಬಾಟಲಿ ಹಾಗೂ ಪ್ಯಾಕೇಟ್ ಸಿಕ್ಕಿದೆ. ವಿಚಾರಣೆ ನಡೆಸಿದಾಗ ಅಂಕೋಲಾದ ಲಕ್ಷಿ ವೈನ್ಸ್ ಮಳಿಗೆಯಿಂದ ಅದನ್ನು ತಂದಿರುವುದಾಗಿ ಅವರು ಬಾಯ್ಬಿಟ್ಟಿದ್ದಾರೆ. ಅಕ್ರಮ ಸರಾಯಿ ಮಾರಾಟದ ಕಾರಣ ಪೊಲೀಸರು ಚೇತನ ನಾಯಕ ಹಾಗೂ ಲತೀಶ ನಾಯಕ ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಆ ಸರಾಯಿ ನೀಡಿದ ಲಕ್ಷಿ ವೈನ್ಸ್ ವಿರುದ್ಧವೂ ಕೇಸು ದಾಖಲಿಸಿದ್ದಾರೆ.