ದೇಶ ಸೇವೆಗಾಗಿ ದೆಹಲಿಗೆ ಹೋಗಿದ್ದ ಜೊಯಿಡಾದ ಯೋಧ ಈಶ್ವರ ನಾಯ್ಕ ಅವರು 30ನೇ ವಯಸ್ಸಿನಲ್ಲಿ ಪ್ರಾಣ ಬಿಟಟಿದ್ದಾರೆ. ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಕಾಲಿಕ ಮರಣಕ್ಕೆ ಒಳಗಾಗಿದ್ದಾರೆ.
ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮದಲ್ಲಿ ಈಶ್ವರ ವಸಂತ ನಾಯ್ಕ ಅವರು ವಾಸವಾಗಿದ್ದರು. 30 ವರ್ಷದ ಅವರು ಬಾಲ್ಯದಲ್ಲಿಯೇ ಸೈನಿಕರಾಗುವ ಕನಸು ಕಂಡಿದ್ದರು. ಅದಕ್ಕಾಗಿ ಶ್ರಮಿಸಿ ಅವರು ದೇಶ ಸೇವೆಗೆ ತೆರಳಿದ್ದರು. 10 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಅವರು ಸೇವೆಗೆ ಸಲ್ಲಿಸಿದ್ದು, ಅನಾರೋಗ್ಯಕ್ಕೆ ತುತ್ತಾಗಿ ದೆಹಲಿಯ ಆರ್ಮಿ ಮೇಡಿಕಲ್ ಕೋರ್ಸ್ ಆಸ್ಪತ್ರೆ ಸೇರಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಮಂಗಳವಾರ ಅವರ ಶವ ಜೊಯಿಡಾಗೆ ಆಗಮಿಸಿದ್ದು, ಸಾವಿರಾರು ಜನ ನಮನ ಸಲ್ಲಿಸಿದರು. ಮೂರು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈಶ್ವರ ನಾಯ್ಕ ಅವರಿಗೆ ಒಂದು ವರ್ಷದ ಪುಟ್ಟ ಗಂಡು ಮಗುವಿರುವುದನ್ನು ನೆನೆದು ಜನ ಕಣ್ಣೀರಾದರು. ಮಾಜಿ ಸೈನಿಕರ ಸಂಘದವರು ಶಿವಾಜಿ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದು, ಇಡೀ ತಾಲೂಕು ಶೋಕದಲ್ಲಿ ಮುಳುಗಿತ್ತು.