ತಟಗಾರ ಬಳಿಯ ಶೀಗೇಪಾಲ್ ಗ್ರಾಮಕ್ಕೆ ಮೂರು ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ದೂರು ಸ್ವೀಕರಿಸಿದ ಹೆಸ್ಕಾಂ ಶಾಖಾಧಿಕಾರಿ ರಮಾಕಾಂತ ನಾಯ್ಕ ಅವರು ಒಂದೇ ದಿನದಲ್ಲಿ ಹೊಸ ವಿದ್ಯುತ್ ಟ್ರಾನ್ಸಫರ್ಮರ್’ನ್ನು ಮಂಜೂರಿ ಮಾಡಿಸಿದ್ದಾರೆ. ಜೋರು ಮಳೆ, ವಾಹನ ಸಮಸ್ಯೆ, ಆನ್‌ಲೈನ್ ಪ್ರಕ್ರಿಯೆಯ ಸವಾಲುಗಳನ್ನು ಎದುರಿಸಿ ಮರುದಿನವೇ ಆ ಊರಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ.
ಯಲ್ಲಾಪುರದಿಂದ ಅನತಿ ದೂರದಲ್ಲಿರುವ ಶೀಗೇಪಾಲ್ ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿತ್ತು. ಹೆಸ್ಕಾಂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದಾಗ ವಿದ್ಯುತ್ ಟ್ರಾನ್ಸಫರ್ಮರ್ ಸುಟ್ಟು ಹೋಗಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಮೂರು ದಿನಗಳಿಂದ ಆ ಭಾಗಕ್ಕೆ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ. ಶಾಲಾ ಮಕ್ಕಳು ಸೇರಿದಂತೆ ಆ ಭಾಗದ ಜನ ಸಮಸ್ಯೆ ಅನುಭವಿಸುತ್ತಿದ್ದರು. ಈ ವಿಷಯದ ಬಗ್ಗೆ ಊರಿನವರು ಯಲ್ಲಾಪುರದ ಹೆಸ್ಕಾಂ ಶಾಖಾಧಿಕಾರಿ ರಮಾಕಾಂತ ನಾಯ್ಕ ಅವರ ಜೊತೆ ಚರ್ಚಿಸಿ, ಕೂಡಲೇ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಡ ಹಾಕಿದ್ದರು.
ಹೊಸದಾಗಿ ವಿದ್ಯುತ್ ಟ್ರಾನ್ಸಫರ್ಮರ್ ಅಳವಡಿಕೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕಿತ್ತು. ನಿಧಾನಗತಿಯ ಇಂಟರ್‌ನೆಟ್, ಸರ್ವರ್ ಸಮಸ್ಯೆ ನಡುವೆಯೂ ಆ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅಧಿಕಾರಿಗಳ ವಿಶೇಷ ಮುತುವರ್ಜಿಯಿಂದ ಆ ಕೆಲಸ ಸಲೀಸಾಗಿ ನಡೆಯಿತು. ಶಿರಸಿಯಿಂದ ಹೊಸ ವಿದ್ಯುತ್ ಟ್ರಾನ್ಸಫರ್ಮರ್ ತರಿಸಲು ವಾಹನ ಸಮಸ್ಯೆ ಕಾಡಿತು. ಜನರ ಸಮಸ್ಯೆ ಬಹುಬೇಗ ದೂರ ಮಾಡುವುದಕ್ಕಾಗಿ ಬೇರೆ ವಾಹನ ಮಾಡಿ ವಿದ್ಯುತ್ ಟ್ರಾನ್ಸಫರ್ಮರ್ ತರಿಸಲಾಯಿತು. ಬುಧವಾರ, ಅದನ್ನು ಅಳವಡಿಸುವ ವೇಳೆ ಜೋರು ಮಳೆ ಶುರುವಾಯಿತು. ಅದಾಗಿಯೂ, ಹೆಸ್ಕಾಂ ಸಿಬ್ಬಂದಿ ಉಮೇಶಕುಮಾರ ಗುಡಿಯಾಳ, ಶೇಖರ ಎರಗೇರಿ, ಮಂಜು ಪಾವಸ್ಕರ್, ಚಂದ್ರು ವಿವೇಕಿ, ಪ್ರಕಾಶ ಮಾಳಶೇಖರ, ಪ್ರವೀಣ ಶೆಟ್ಟಿ, ವಿನಾಯಕ ಕಾಂಬ್ಳೆ, ಗುರುನಾಥ ಮರಾಠಿ ಅವರು ದಿನವೀಡಿ ದುಡಿದು ವಿದ್ಯುತ್ ಪೂರೈಸಿದರು.
ವಿದ್ಯುತ್ ಟ್ರಾನ್ಸಫರ್ಮರ್ ಅಳವಡಿಸುವ ಜಾಗಕ್ಕೆ ಸುಲಭವಾಗಿ ಹೋಗುವ ಹಾಗಿರಲಲ್ಲ. ಮಳೆ ಕಾರಣ ಅಲ್ಲಿನ ನೆಲ ಜಾರುತ್ತಿದ್ದು, ಗಿಡ-ಗಂಟಿಗಳು ಸಾಕಷ್ಟು ಬೆಳೆದಿದ್ದವು. ಶೀಗೇಪಾಲಿನ ಆರ ಎಸ್ ಭಾಗ್ವತ, ಗಜಾನನ ಭಟ್ಟ ಕಲ್ಲಬ್ಬಿಮನೆ, ನಾಗೇಂದ್ರ ಭಟ್ಟ ಶೀಗೆಪಾಲ್, ವಿನಾಯಕ ಭಟ್ಟ ಕಲ್ಲಬ್ಬಿಮನೆ, ಶ್ರೀಪತಿ ಭಟ್ಟ ದೇವಸ, ಎನ್ ಕೆ ಭಟ್ಟ ಶೀಗೆಪಾಲ್ ಸೇರಿ ಆ ಜಾಗ ಸರಿ ಮಾಡಿದರು. ವಿದ್ಯುತ್ ಟ್ರಾನ್ಸಫರ್ಮರ್ ಅಳವಡಿಕೆಗೆ ಹೆಸ್ಕಾಂ ಸಿಬ್ಬಂದಿಗೆ ಅವರೆಲ್ಲರೂ ಸಹಕರಿಸಿದರು.