ಯಲ್ಲಾಪುರದ ಹಿತ್ಲಳ್ಳಿಯಲ್ಲಿ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆಯ ಕುರಿತು ಜಾಗೃತಿ ಮೂಡಿಸಲು ನಾನಾ ಬಗೆಯ ಪ್ರಯತ್ನಗಳನ್ನು ನಡೆಸಲಾಗಿದೆ. ಗಿಡ ನಾಟಿ, ಮಕ್ಕಳಿಗೆ ಸ್ಪರ್ಧೆ, ಶ್ರಮದಾನ ಹಾಗೂ ಚಿತ್ರಕಲೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವವನ್ನು ಪ್ರಚಾರ ಮಾಡಲಾಗಿದೆ.
ಹಿತ್ಲಳ್ಳಿ ಗ್ರಾಮ ಪಂಚಾಯತದಿAದ ವಿವಿಧ ಕಡೆ ಭೇಟಿ ನೀಡಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯತನ ಆಡಳಿತಾಧಿಕಾರಿಯೂ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರು ಜಾಥಾವನ್ನು ಆಯೋಜಿಸಿದ್ದಾರೆ. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಈ ಜಾಥಾ ಮತದಾನ ಹಾಗೂ ಜವಾಬ್ದಾರಿಯುತ ಜನಪ್ರತಿನಿಧಿ ಆಯ್ಕೆಯ ಬಗ್ಗೆ ಜಾಗೃತಿ ಮೂಡಿಸಿದೆ. ಹಿತ್ಲಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಲೆಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಲಾಗಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿಯೇ ಈ ಸ್ಪರ್ಧೆ ನಡೆದಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಅದಾದ ನಂತರ ನಡೆದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಗಿಡ ನಾಟಿ, ಶ್ರಮದಾನದಲ್ಲಿಯೂ ಊರಿನವರು ಭಾಗವಹಿಸಿದ್ದಾರೆ. ಗ್ರಾ ಪಂ ಪಿಡಿಓ ನಾರಾಯಣ ಗೌಡ ಹಾಗೂ ಕಾರ್ಯದರ್ಶಿ ಸದ್ದಾಂ ಬಾಪುನವರ ಸೇರಿ ಈ ಎಲ್ಲಾ ಕಾರ್ಯಕ್ರಮ ಆಯೋಜಿಸಿದ್ದು, ಗ್ರಾ ಪಂ ಸಿಬ್ಬಂದಿ ಜೊತೆ ಶಾಲೆಯವರು ಕೈ ಜೋಡಿಸಿದ್ದಾರೆ.