ಅಂಕೋಲಾ ಕೇಣಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಂದರು ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ಅಲ್ಲಿನ ಜನ ಖಂಡಿಸಿದ್ದು, ಬುಧವಾರ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ಪಾದಯಾತ್ರೆಯನ್ನು ಮಾಡಿದ್ದಾರೆ.
ಈ ದಿನ ನೂರಾರು ಜನ ಅಂಕೋಲಾದಿoದ ಕಾರವಾರದವರೆಗೆ ಮೆರವಣಿಗೆ ಮಾಡಿದ್ದಾರೆ. ಅಂಕೋಲಾದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಹೊರಟ ಪ್ರತಿಭಟನಾಕಾರರು `ಅಂಕೋಲಾ ಉಳಿಸಿ’ ಎಂದು ಘೋಷಣೆ ಕೂಗಿದ್ದಾರೆ. `ಈ ಯೋಜನೆ ಅನುಷ್ಠಾನಗೊಂಡರೆ ಉತ್ತರ ಕನ್ನಡದ ಪರಿಸರ, ಮೀನುಗಾರಿಕೆ, ಕೃಷಿ ಜೊತೆ ಪ್ರವಾಸೋದ್ಯಮವೂ ಹಾಳಾಗಲಿದೆ. ಜೀವವೈವಿಧ್ಯತೆಗೆ ಚೇತರಿಸಿಕೊಳ್ಳಲಾಗದಷ್ಟು ಗಂಭೀರ ಹಾನಿಯಾಗಲಿದೆ’ ಎಂದು ಪ್ರತಿಭಟನಾಕಾರರು ಆತಂಕದ ಮಾತನಾಡಿದ್ದಾರೆ.
`ಧರಣಿ, ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಅಭಿಯಾನಗಳ ಮೂಲಕ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. 10 ಸಾವಿರಕ್ಕೂ ಅಧಿಕ ಜನ ಯೋಜನೆ ವಿರುದ್ಧವಿದ್ದರೂ ಅದಕ್ಕೆ ಬೆಲೆ ಕೊಟ್ಟಿಲ್ಲ’ ಎಂದು ಆಕ್ರೋಶದ ಮಾತನಾಡಿದ್ದಾರೆ. `ಈ ಯೋಜನಾ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಭೂ ವ್ಯವಹಾರಗಳ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.