ದೇವರಿಗೆ ಅರ್ಪಿಸಿದ ಹೂವನ್ನು ಕೆರೆಗೆ ಎಸೆಯಲು ಹೋಗಿದ್ದ ಜಾಯವ್ವ ಸುಳಗೇಕರ್ ಅವರು ಅದೇ ಕೆರೆಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಒಂದು ದಿನದ ನಂತರ ಅವರ ಶವ ಕೆರೆಯಿಂದ ಮೇಲೆ ಬಂದಿದ್ದು, ಮಗನ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಳಿಯಾಳದ ಮುರ್ಕುವಾಡದಲ್ಲಿ ಜಾಯವ್ವ ಗಂಗರಾಜ ಸುಳಗೇಕರ್ ಅವರು ವಾಸವಾಗಿದ್ದರು. 96 ವರ್ಷದ ಅವರು ದೇವರ ಸೇವೆ ಮಾಡುತ್ತ ಬದುಕು ಕಟ್ಟಿಕೊಂಡಿದ್ದರು. ಆರೋಗ್ಯಕರವಾಗಿ ಸುದೀರ್ಘ ಜೀವನ ನಡೆಸಿದ ಅವರು ನಿತ್ಯ ದೇವರ ಪೂಜೆ ಮಾಡುವುದನ್ನು ರೂಢಿಸಿಕೊಂಡಿದ್ದರು. ದೇವರಿಗೆ ಸಲ್ಲಿಸಿದ ಹೂವುಗಳನ್ನು ಅವರು ಸಮೀಪದ ಕೆರೆಗೆ ಬಿಡುತ್ತಿದ್ದರು.
ಜುಲೈ 21ರ ಬೆಳಗ್ಗೆ 10 ಗಂಟೆ ವೇಳೆಗೆ ದೇವರ ಪೂಜೆ ಮಾಡಿದ ಅವರು ಹಳೆಯ ಹೂವುಗಳನ್ನು ಕೆರೆಗೆ ಬಿಡಲು ಹೋಗಿದ್ದರು. ಆ ದಿನ ಅವರು ಕಾಣೆಯಾಗಿದ್ದು, ಎಲ್ಲಿ ಹುಡುಕಿದರೂ ಸಿಗಲಿಲ್ಲ. ಜುಲೈ 22ರಂದು ಬೆಳಗ್ಗೆ 7 ಗಂಟೆಗೆ ಅವರ ಶವ ಕೆರೆಯಲ್ಲಿ ಕಾಣಿಸಿತು. ಹೂವು ಎಸೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಅವರು ಸಾವನಪ್ಪಿರುವುದು ಖಚಿತವಾಯಿತು. ಮುರ್ಕುವಾಡದ ಮಾದೇವ ಗಂಗರಾಜ ಸುಳಗೇಕರ್ ಅವರು ತಾಯಿ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.