ದಾಸನಕೊಪ್ಪದಲ್ಲಿ ನಡೆದಿದ್ದ ಹೋರಿ ಹಬ್ಬದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ಗಣೇಶ ಮಡಿವಾಳ ಅವರು ಆ ದಿನ ಅಖಾಡಕ್ಕೆ ಇಳಿಯಲು ಬಿಡದ ಕಾರಣ ಈ ದಿನ ಅದೇ ಊರಿನ ಪ್ರವೀಣ ಮಾಳಕ್ಕನವರ್, ಆಕಾಶ ಬೋವಿವಡ್ಡರ್, ಚಂದನ ಗೌಡ, ಕಾರ್ತಿಕ ಮಾಳಕ್ಕನವರ್, ರಾಘವೇಂದ್ರ ಹಾಗೂ ಶಶಾಂಕ ಸೇರಿ ಹೊಡೆದಿದ್ದಾರೆ. ಕಬ್ಬಿಣದ ರಾಡಿನಿಂದ ಅವರು ಥಳಿಸಿದ್ದು, ಇದನ್ನು ನೋಡಿದ ರಾಮಾಪುರದ ಬಸವರಾಜ ಮಡಿವಾಳ, ಮಳಲಗಾಂವಿನ ಬಸವರಾಜ ಮಡಿವಾಳ ಸೇರಿ ಗಣೇಶ ಮಡಿವಾಳರ ಜೀವ ಉಳಿಸಿದ್ದಾರೆ.
ಶಿರಸಿಯ ಬಿಸಲಕೊಪ್ಪದ ಬಳಿಯ ಮಳಲಗಾಂವಿನಲ್ಲಿ ಗಣೇಶ ಮಡಿವಾಳ ಅವರು ವಾಸವಾಗಿದ್ದಾರೆ. 2026ರ ಫೆಬ್ರವರಿ 16ರಂದು ಅವರ ಊರಿನಲ್ಲಿ ಅದ್ಧೂರಿ ಹೋರಿ ಹಬ್ಬ ನಡೆದಿದೆ. ಈ ಹೋರಿ ಹಬ್ಬದ ದಿನ ಗಣೇಶ ಮಡಿವಾಳ ಅವರು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ. ಅವರ ಜೊತೆ ಊರಿನ ಅನೇಕರು ಹಬ್ಬದ ಯಶಸ್ಸಿಗೆ ದುಡಿದಿದ್ದಾರೆ. ಹೀಗಿರುವಾಗ, ಆ ದಿನ ಹೋರಿ ಹಬ್ಬ ನೋಡಲು ದಾಸನಕೊಪ್ಪದ ಪ್ರವೀಣ ನಾಗರಾಜ ಮಾಳಕ್ಕನವರ್ ಅವರು ಬಂದಿದ್ದಾರೆ. ಅವರ ಜೊತೆ ಅದೇ ಊರಿನ ರಾಘವೇಂದ್ರ, ಆಕಾಶ ಸತೀಶ್ ಭೋವಿವಡ್ಡರ್ ಶಶಾಂಕ, ಚಂದನ ಗೌಡ, ಕಾರ್ತಿಕ ಮಾಳಕ್ಕನವರ್ ಸಹ ಆಗಮಿಸಿದ್ದಾರೆ.
ಪ್ರವೀಣ ಮಾಳಕ್ಕನವರ್ ತಂಡದವರು ಹೋರಿ ಹಬ್ಬದ ಅಖಾಡಕ್ಕೆ ಹಾರುವ ಪ್ರಯತ್ನ ಮಾಡಿದ್ದು, ಅದನ್ನು ಗಣೇಶ ಮಡಿವಾಳ ಅವರು ತಡೆದಿದ್ದಾರೆ. ಇದರಿಂದ ಆ ತಂಡದ ಎಲ್ಲರೂ ಸಿಟ್ಟಾಗಿದ್ದಾರೆ. ಹೋರಿ ಹಬ್ಬದ ದಿನ ತಮಗೆ ಅಖಾಡಕ್ಕೆ ಇಳಿಯಲು ಬಿಡದ ಗಣೇಶ ಮಡಿವಾಳರ ವಿರುದ್ಧ ಸೇಡು ತೀರಿಸಿಕೊಳ್ಳಲು ಅವರೆಲ್ಲರೂ ಸಂಚು ರೂಪಿಸಿದ್ದಾರೆ. ಹೀಗಿರುವಾಗ, ಜುಲೈ 19ರಂದು ಗಣೇಶ ಮಡಿವಾಳ ಅವರು ಸಹೋದರ ಭರತ ಮಡಿವಾಳ ಅವರ ಜೊತೆ ದಾಸನಕೊಪ್ಪಕ್ಕೆ ಹೋಗಿದ್ದಾರೆ. ಅಲ್ಲಿ ಗೊಬ್ಬರ ಖರೀದಿ ಮಾಡಲು ನಿರ್ಧರಿಸಿದ ಗಣೇಶ ಮಡಿವಾಳ ಅವರನ್ನು ಪ್ರವೀಣ ಮಾಳಕ್ಕನವರ್ ಅವರು ನೋಡಿದ್ದಾರೆ. ಕೂಡಲೇ ತಮ್ಮ ದುಷ್ಟಕೂಟದ ಇನ್ನಿತರರನ್ನು ಅಲ್ಲಿಗೆ ಕರೆಯಿಸಿದ್ದಾರೆ.
ಇಂಡಿಯನ್ ಓವರ್ಸಿಸ್ ಬ್ಯಾಂಕ್ ಎದುರು ಗಣೇಶ ಮಡಿವಾಳ ಹಾಗೂ ಭರತ ಮಡಿವಾಳ ಅವರು ಸಿಕ್ಕಿ ಬಿದ್ದಿದ್ದಾರೆ. ಆಗ ಪ್ರವೀಣ ಮಾಳಕ್ಕನವರ್, ಆಕಾಶ ಬೋವಿವಡ್ಡರ್, ಚಂದನ ಗೌಡ, ಕಾರ್ತಿಕ ಮಾಳಕ್ಕನವರ್, ರಾಘವೇಂದ್ರ ಹಾಗೂ ಶಶಾಂಕ ಸೇರಿ ಕಬ್ಬಿಣದ ರಾಡಿನಿಂದ ಅವರಿಬ್ಬರಿಗೂ ಹೊಡೆದಿದ್ದಾರೆ. ಕಾಲಿನಿಂದ ತುಳಿದು ನೋವು ಮಾಡಿದ್ದಾರೆ. ಆಗ, ಅಲ್ಲದ್ದ ರಾಮಾಪುರದ ಬಸವರಾಜ ಪರಶುರಾಮ ಮಡಿವಾಳ, ಮಳಲಗಾಂವಿನ ಬಸವರಾಜ ದ್ಯಾವಾ ಮಡಿವಾಳ ಅವರು ಈ ಹೊಡದಾಟ ಬಿಡಿಸಿದ್ದಾರೆ. ಭರತ ಮಡಿವಾಳ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.
`ಸಹನೆಯಿಂದ ವರ್ತಿಸಿ. ಶಾಂತಿ ಕಾಪಾಡಿ’