ಗೋಕರ್ಣದ ಮಹಾಗಣಪತಿ ವಿಗ್ರಹದ ಸವಕಳಿ ಶುರುವಾಗಿದ್ದು, ಈ ದಿನದಿಂದಲೇ ದೇವರ ಮೂರ್ತಿ ಮುಟ್ಟುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಸಾರ್ವಜನಿಕರ ಪೂಜಾ ಸೇವೆಗಳನ್ನು ಬಂದ್ ಮಾಡಲಾಗಿದೆ.
ಬುಧವಾರ ಸಂಜೆ ದೇಗುಲದ ಆವಾರದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ ಅವರು ಸಭೆ ನಡೆಸಿದ್ದು, ಸಲಹೆ-ಸೂಚನೆಗಳನ್ನು ಆಲಿಸಿ ಈ ನಿರ್ಣಯ ಹೊರಡಿಸಲಾಗಿದೆ. ಶತ ಶತಮಾನಗಳ ಹಿಂದಿನ ಗಣಪತಿ ವಿಗ್ರಹ ಸವಕಳಿ ಬರುತ್ತಿರುವುದು ದಶಕದ ಹಿಂದೆ ಗಮನಕ್ಕೆ ಬಂದಿತ್ತು. ಈಚೆಗೆ ಈ ವಿಗ್ರಹದ ಕೈ, ಭುಜ, ಎದೆ ಭಾಗದಲ್ಲಿ ಮತ್ತಷ್ಟು ಸವಕಳಿಯಾಗಿರುವುದನ್ನು ಅಲ್ಲಿನವರು ಗಮನಿಸಿದ್ದರು. ಈ ಹಿನ್ನಲೆ ದೇವರ ವಿಗ್ರಹಕ್ಕೆ ಅಭಿಷೇಕ, ಪೂಜೆ ನಿಷೇಧಿಸುವುದರ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದು, ಸರ್ವರು ಅದಕ್ಕೆ ಒಪ್ಪಿದ ಕಾರಣ ಸ್ಪರ್ಶ ದರ್ಶನ ಹಾಗೂ ಪೂಜಾ ಸೇವೆಗಳನ್ನು ಸ್ಥಗಿತ ಮಾಡಲಾಗಿದೆ.
VIP ದರ್ಶನಕ್ಕೂ ಅವಕಾಶವಿಲ್ಲ!
ಈ ನಿಷೇಧ ಜನ ಸಾಮಾನ್ಯರಿಂದ ಹಿಡಿದು ಗಣ್ಯರವರೆಗೆ ಎಲ್ಲರಿಗೂ ಅನ್ವಯವಾಗಲಿದೆ. ಸ್ಥಳೀಯರು ಸಹ ಹೊರಗಿನಿಂದ ಮಾತ್ರ ದೇವರ ದರ್ಶನಪಡೆಯಬೇಕಿದ್ದು, ಸಂಕಷ್ಟಿ-ಗಣೇಶ ಚತುರ್ಥಿ ಸಯದಲ್ಲೂ ಸಹ ಇದೇ ಕ್ರಮ ಮುಂದುವರಿಯಲಿದೆ. ಇಲ್ಲಿ ನಡೆಯುತ್ತಿದ್ದ ಕೊಟ್ಟೆ ಕಣಜ, ಸಕ್ಕರೆ ಕಣಜ ಸೇವೆಗಳನ್ನು ಸಹ ನಿಷೇಧಿಸಲಾಗಿದೆ. ಗಣ್ಯರಿಗೂ ಸಹ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಪುರಾತನ ಮೂರ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕಟ್ಟು ನಿಟ್ಟಾಗಿ ಈ ಸೂಚನೆ ಪಾಲಿಸಲಾಗುತ್ತಿದೆ.