`ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣವು ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಆರಂಭಿಕ ಹಂತದಲ್ಲಿಯೇ ನಿಗದಿಪಡಿಸಿಕೊಂಡು ಸಾಧನೆ ಮಾಡಬೇಕು’ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಹೇಳಿದ್ದಾರೆ. ಶಿರಸಿಯ ಅಂಬೇಡ್ಕರ್ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಬೆಡ್‌ಶೀಟ್ ವಿತರಿಸಿದ ಅವರು `ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಲಿಕೆ ಅನಿವಾರ್ಯ’ ಎಂದಿದ್ದಾರೆ.
`ವಿದ್ಯಾರ್ಥಿನಿಯರು ಹಂತದಲ್ಲಿಯೇ ಮುಂದಿನ ಭವಿಷ್ಯದ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಗುರಿ ಸಾಧನೆಗಾಗಿ ನಿರಂತರವಾಗಿ ಶ್ರಮಿಸಬೇಕು. ಸ್ಕೊಡ್‌ವೆಸ್ ಸಂಸ್ಥೆಯು ತನ್ನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಸಂಬoಧಿಸಿದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ವಿದ್ಯಾರ್ಥಿನಿಯರು ಈ ಅವಕಾಶಗಳ ಸದುಪಯೋಗವನ್ನು ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ನಾರಾಯಣ ಹೆಗಡೆ ಹಾಗೂ ಅಂಬೇಡ್ಕರ್ ಸರ್ಕಾರಿ ವಸತಿ ನಿಲಯದ ವಾರ್ಡ್ನ್ ರಾಜೇಶ್ವರಿ, ವಸತಿ ನಿಲಯದ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಹಾಜರಿದ್ದರು. 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್ ವಿತರಣೆ ನಡೆಯಿತು.