ಭಟ್ಕಳದಲ್ಲಿ ಗಾರೆ ಕೆಲಸ ಮಾಡುವ ಸೈಯದ್ ಅಲಿ ಅವರು ಬೈಕ್ ಕದ್ದು ಸಿಕ್ಕಿ ಬಿದ್ದಿದ್ದಾರೆ. ಬೈಕ್ ವಶಕ್ಕೆಪಡೆದ ಪೊಲೀಸರು ಸಯ್ಯದ್ ಅಲಿ ಅವರನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.
ಭಟ್ಕಳದ ಫಿರ್ದೋಸ್ ನಗರದಲ್ಲಿ ಸಯ್ಯದ್ ಅಲಿ ಸಯ್ಯದ್ ರೆಹಮತುಲ್ಲಾ ಅವರು ವಾಸವಾಗಿದ್ದಾರೆ. 22 ವರ್ಷದ ಅವರು ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಅದರ ಜೊತೆ ಆಗಾಗ ಕಳ್ಳತನ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಏಪ್ರಿಲ್ 28ರಂದು ಪಲ್ಸರ್ ಬೈಕ್ ಮೇಲೆ ಕಣ್ಣು ಹಾಕಿದ ಅವರು ನಕಲಿ ಚಾವಿ ಬಳಸಿ ಆ ಬೈಕ್ ಅಪಹರಿಸಿದ್ದಾರೆ. ಹೆಬಳೆ ನೆರ್ಲೆಸರದಲ್ಲಿ ನಿಲ್ಲಿಸಿದ ಬೈಕ್ ಕಾಣೆಯಾದ ಬಗ್ಗೆ ಬೈಕ್ ಮಾಲಕ ಲೋಹಿತ್ ಮೊಗೇರ್ ಅವರು ಪೊಲೀಸ್ ದೂರು ನೀಡಿದ್ದಾರೆ.
ಅದಾದ ನಂತರ ಬೈಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಆ ತಂಡದ ಮುಖ್ಯಸ್ಥರಾದ ಭಟ್ಕಳ ಪಿಐ ವೆಂಕಟೇಶ ಮರನಾಳ ಅವರು ವಿವಿಧ ಕಡೆ ಶೋಧ ನಡೆಸಿದ್ದಾರೆ. ಪಿಸೈ ಬರಮಪ್ಪ ಬೆಳಗಲಿ ಅವರ ಜೊತೆ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಮಂಜುನಾಥ ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಗಲ್, ನಿಂಗನಗೌಡ ಪಾಟೀಲ್ ಅವರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಆಗ, ಆ ಬೈಕು ಸಯ್ಯದ್ ಅಲಿ ಅವರ ಬಳಿಯಿರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಸಯ್ಯದ್ ಅಲಿ ಅವರೇ ಬೈಕ್ ಕದ್ದಿರುವುದು ದೃಢವಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.