ದಾಂಡೇಲಿ ಪಟೇಲ ನಗರದಲ್ಲಿ ರಾತ್ರಿ ವೇಳೆ ಮೊಸಳೆ ಓಡಾಡುತ್ತಿದ್ದು, ಆ ಮೊಸಳೆಯನ್ನು ಸದ್ಯ ಹಿಡಿದು ನದಿಗೆ ಬಿಡಲಾಗಿದೆ. ನಿತ್ಯ ಓಡಾಡುವ ಮರಿ ಮೊಸಳೆ ಜನರ ಆತಂಕ ಹೆಚ್ಚಿಸಿದ ಕಾರಣ ಅರಣ್ಯ ಅಧಿಕಾರಿಗಳು ಅದನ್ನು ಹಿಡಿಯುವ ಕೆಲಸ ಮಾಡಿದ್ದಾರೆ.
ದಾಂಡೇಲಿ ಪಟೇಲ್ ನಗರದಲ್ಲಿ ರಾತ್ರಿ ಮೊಸಳೆ ಮರಿ ಓಡಾಡುವ ಬಗ್ಗೆ ಜನ ದೂರಿದ್ದರು. ಆದರೆ, ಆ ಮೊಸಳೆ ಮಾತ್ರ ಯಾರ ಕೈಗೂ ಸಿಗುತ್ತಿರಲಿಲ್ಲ. ಕಣ್ಣಿಗೆ ಕಾಣಿಸಿಕೊಂಡ ಕ್ಷಣ ಮಾತ್ರದಲ್ಲಿಯೇ ಆ ಮರಿ ಸ್ಥಳಾಂತರ ಮಾಡುತ್ತಿದ್ದು, ಬುಧವಾರ ರಾತ್ರಿ ರಸ್ತೆ ಮೇಲೆ ಓಡಾಡುತ್ತಿದ್ದ ಮೊಸಳೆ ಬಲೆಗೆ ಬಿದ್ದಿತು. ಉರಗ ತಜ್ಞ ರಜಾಕ್ ಶಾ ಅವರು ಈ ಮಾಹಿತಿ ಆಧರಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಆ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಟ್ಟರು.
ಕಾಳಿ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಸಳೆಗಳಿದ್ದು, ಅಲ್ಲಿಂದಲೇ ಈ ಮರಿ ಬಂದಿರುವ ಬಗ್ಗೆ ಅಂದಾಜಿಸಲಾಗಿದೆ. ಕಾಳಿ ನದಿಗೆ ಸಂಪರ್ಕ ಹೊಂದಿದ ಗಟಾರದಿಂದ ಮರಿ ಬಂದು ರಾತ್ರಿಯಿಡೀ ಪಟೇಲ ನಗರ ಸುತ್ತಾಡಿದ ಬಗ್ಗೆ ಜನ ಮಾತನಾಡಿದ್ದಾರೆ. ಮೊಸಳೆ ಕಂಡ ತಕ್ಷಣ ಅದರ ಸಮೀಪ ಹೋಗದೇ ಅರಣ್ಯ ಇಲಾಖೆಗೆ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.