ಅಂಬೇವಾಡಿಯ ಕಾವ್ಯ ಗೌಡ ಅವರ ಒಡೆತನದಲ್ಲಿದ್ದ ಚಿನ್ನಾಭರಣಗಳು ಕಳ್ಳತನವಾಗಿದೆ. ಅವರ ಮನೆಗೆ ಕೆಲಸಕ್ಕೆ ಬರುವ ಗಾಂವಠಾಣಾದ ಶಹನಾಜ್ ಕಾಕರ ಅವರೇ 15 ಲಕ್ಷ ರೂ ಮೌಲ್ಯದ ಆಭರಣ ಕದ್ದ ಅನುಮಾನ ಶುರುವಾಗಿದೆ.
ದಾಂಡೇಲಿಯ ಅಂಬೇವಾಡಿ ಕೆ ಎಚ್ ಬಿ ಕಾಲೋನಿಯಲ್ಲಿ ಕಾವ್ಯ ಸೋಮಶೇಖರ ಗೌಡ ಅವರು ವಾಸವಾಗಿದ್ದಾರೆ. ಅವರ ಪತಿ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ವಿದ್ಯುತ್ ಸಾಮಗ್ರಿ ಖರೀದಿ ಹಾಗೂ ಕೆಲಸಗಾರರಿಗೆ ಹಣ ಕೊಡಬೇಕಾದ ವೇಳೆ ಅವರು ಕಾವ್ಯ ಗೌಡ ಅವರ ಬಂಗಾರವನ್ನು ಅಡವಿಡುತ್ತಾರೆ. ಆ ಕೆಲಸದ ಬಿಲ್ ಪಾವತಿ ಆದ ನಂತರ ಮಣಿಪುರಂ ಗೋಲ್ಡ್’ನಿಂದ ಬಂಗಾರ ಬಿಡಿಸಿಕೊಂಡು ಬರುತ್ತಾರೆ. ಹೀಗೆ ಮನೆಗೆ ಬಂದ ಬಂಗಾರವನ್ನು ಕಾವ್ಯ ಗೌಡ ಅವರು ಜೋಪಾನವಾಗಿರಿಸಿಕೊಂಡಿದ್ದು, ಆಗಾಗ ಒಂದೋoದೇ ಒಡವೆ ಕಾಣೆಯಾಗಿದೆ.
ಕಾವ್ಯ ಗೌಡ ಅವರ ಮನೆಗೆ ದಾಂಡೇಲಿ ಗಾಂವಠಾಣಾದ ಶಹನಾಜ್ ಸಲೀಂ ಕಾಕರ ಅವರು ಕೆಲಸಕ್ಕೆ ಬರುತ್ತಿದ್ದಾರೆ. 2025ರ ಅಗಸ್ಟ್ 8ರಂದು ಬಂಗಾರ ಬಿಡಿಸಿಕೊಂಡು ಬಂದಿದನ್ನು ಕೆಲಸದಾಕೆ ನೋಡಿದ್ದಾರೆ. 2026ರ ಜುಲೈ 7ರಂದು ಕಾವ್ಯ ಗೌಡ ಅವರು ಪರಿಶೀಲಿಸಿದಾಗ ಅನೇಕ ಬಗೆಯ ಬಂಗಾರದ ಆಭರಣಗಳು ಕಾಣೆಯಾಗಿದೆ. ಒಂದೋAದೇ ಬಂಗಾರದ ಒಡವೆಗಳು ಹಂತ ಹಂತವಾಗಿ ಕಣ್ಮರೆಯಾಗಿದ್ದು ಮೂರು ಬಂಗಾರದ ಚೈನು, ಉಂಗುರ, ಬ್ರಾಸ್‌ಲೈಟ್ ಸೇರಿ 15 ಲಕ್ಷ ರೂ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಕೆಲಸದಾಕೆ ಶಹನಾಜ್ ಕಾಕರ ಅವರ ಮೇಲೆ ಕಾವ್ಯ ಗೌಡ ಅವರಿಗೆ ಅನುಮಾನ ಮೂಡಿದೆ.
`ಶಹನಾಜ್ ಕಾಕರ ಅವರನ್ನು ವಿಚಾರಣೆಗೊಳಪಡಿಸಬೇಕು. ತಮ್ಮ ಬಂಗಾರ ಮರಳಿಸಬೇಕು’ ಎಂದು ಕಾವ್ಯ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.