ಕಳೆದ ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 7 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು 1.45 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ. ಜೊತೆಗೆ ಅವರ ಕ್ಲಿನಿಕ್ ಸಹ ಬಂದ್ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ನಡುಕ ಹುಟ್ಟಿಸಿದ್ದು, ಅರ್ಹತೆ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಗುರುವಾರ ಡೀಸಿ ಕಚೇರಿಯಲ್ಲಿ ಕುಂದು-ಕೊರತೆ ಸಭೆ ನಡೆಸಿದ ಅವರು `ನಿಯಮಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಬರುವ ಎಲ್ಲಾ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಮತ್ತೊಮ್ಮೆ ಹೇಳಿದ್ದಾರೆ. `ನಕಲಿ ವೈದ್ಯರ ಪತ್ತೆಗೆ ವಿಶೇಷ ಪಡೆ ರಚಿಸಬೇಕು. ಅಂಥ ವೈದ್ಯರಿಗೆ ಗರಿಷ್ಟ ಪ್ರಮಾಣದ ದಂಡ ವಿಧಿಸಿ, ಕ್ಲಿನಿಕ್ ಬಂದ್ ಮಾಡಬೇಕು. ಅದಾಗಿಯೂ, ಮತ್ತೆ ಕ್ಲಿನಿಕ್ ತೆರೆದರೆ ಪ್ರಕರಣ ದಾಖಲಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
`ಅರ್ಹತೆಗನುಗುಣವಾಗಿ ಅನುಮತಿ ಪಡೆದ ವೈದ್ಯಕೀಯ ಪದ್ದತಿಯಲ್ಲಿ ಮಾತ್ರ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ನೀಡಬೇಕು, ಅನುಮತಿಯಿಲ್ಲದ ವೈದ್ಯಕೀಯ ಪದ್ದತಿಯಲ್ಲಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುವುದು ಕಂಡುಬAದಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ತಾಲೂಕುಗಳಲ್ಲಿನ ಖಾಸಗಿ ಕ್ಲಿನಿಕ್‌ಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ನಕಲಿ ವೈದ್ಯರ ಬಗ್ಗೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು’ ಎಂದು ಡೀಸಿ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸಂಜಯ ದೊಡ್ಡಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ ಜಗದೀಶ ಯಾಜಿ, ಆರ್ಥೋಪೆಡಿಕ್ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ನಿತಿನ್ ಪಿಕಳೆ, ಐಎಂಎ ಅಧ್ಯಕ್ಷ ಡಾ ಸುರೇಶ್ ಭಟ್, ಮಹಿಳಾ ಸಾಮಾಜಿಕ ಕಾರ್ಯಕರ್ತೆ ಯಶೋಧ ಹೆಗಡೆ, ವಕೀಲ ಕೃಷ್ಣಾನಂದ ಬಿ ನಾಯ್ಕ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೊರಕರ್ ಸಭೆಯಲ್ಲಿದ್ದರು.