ಎರಡು ತಿಂಗಳ ಹಿಂದೆ ಮಾಜಾಳಿ ಗಡಿಯಲ್ಲಿ ನಡೆದ ಮಾರಾಮಾರಿಯಲ್ಲಿ ಸದಾಶಿವಗಡದ ಸಮೀರ್ ಅತ್ತಾರ್ ಅವರು ಗಾಯಗೊಂಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸಮೀರ್ ಅತ್ತಾರ್ ಅವರ ಮೇಲೆ ದಾಳಿ ಮಾಡಿದ ದರ್ಶನ ಮಾಜಾಳಿಕರ್, ಮೋಸಿಸ್ ಖಾನ್ ಹಾಗೂ ಚೇತು ಎಂಬಾತರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಕಾರವಾರದ ಸದಾಶಿವಗಡದಲ್ಲಿ ಸಮೀರ್ ಅತ್ತಾರ್ ಅವರು ವಾಸವಾಗಿದ್ದಾರೆ. ಚಾಲಕರಾಗಿ ಅವರು ಕೆಲಸ ಮಾಡಿಕೊಂಡಿದ್ದು, ಏಪ್ರಿಲ್ 17ರ ರಾತ್ರಿ 12 ಗಂಟೆಗೆ ಅವರ ಮೇಲೆ ದಾಳಿ ನಡೆದಿದೆ. ಆ ದಿನ ಅವರು ಮನೆಗೆ ಹೋಗುವಾಗ ಮಾಜಾಳಿ ಪೊಲೀಸ್ ಚೆಕ್‌ಪೋಸ್ಟಿನ ಬಳಿ ಅದೇ ಭಾಗದ ದರ್ಶನ ಮಾಜಾಳಿಕರ್, ಮೋಸಿಸ್ ಖಾನ್ ಹಾಗೂ ಮಂಗಳೂರು ಮೂಲದ ಚೇತು ಎಂಬಾತರು ಸಮೀರ್ ಅತ್ತಾರ್ ಅವರನ್ನು ಅಡ್ಡಗಟ್ಟಿದ್ದಾರೆ. ಅವರ ಜೊತೆ ಮತ್ತಿಬ್ಬರು ಅಪರಿಚಿತರು ಸೇರಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾರೆ.
`ನಿನ್ನನ್ನು ಕೊಲ್ಲುವೆ’ ಎಂದು ಅಬ್ಬರಿಸಿ ಆ ಐದು ಜನ ದಾಳಿ ಮಾಡಿದ್ದಾರೆ. ಸಮೀರ್ ಅತ್ತಾರ್ ಅವರು ಆ ವೇಳೆ ತಪ್ಪಿಸಿಕೊಂಡರಾದರೂ ಅವರಿಗೆ ಅಲ್ಲಲ್ಲಿ ಗಾಯವಾಗಿದೆ. ನಂತರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದಾರೆ. ಎದುರಾಳಿಗಳ ದಾಳಿಯಿಂದ ತತ್ತರಿಸಿದ ಸಮೀರ್ ಅತ್ತಾರ್ ಅವರು ಸದ್ಯ ನ್ಯಾಯಾಕ್ಕಾಗಿ ಕಾನೂನು ಹೋರಾಟ ಶುರು ಮಾಡಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣೆಗೆ ಹೋಗಿ ಆ ದಿನ ನಡೆದ ಘಟನಾವಳಿಗಳ ಬಗ್ಗೆ ದೂರು ನೀಡಿದ್ದಾರೆ.
`ಪೊಲೀಸರ ಸಮ್ಮುಖದಲ್ಲಿಯೇ ತಮ್ಮ ಮೇಲೆ ದಾಳಿ ನಡೆದಿದ್ದು, ಮಾಜಾಳಿ ಗಡಿಯ ಸಿಸಿ ಕ್ಯಾಮರಾದಲ್ಲಿಯೂ ದೃಶ್ಯಾವಳಿಗಳು ಸೆರೆಯಾಗಿದೆ’ ಎಂದು ಸಮೀರ್ ಅತ್ತಾರ್ ಅವರು ದೂರಿನಲ್ಲಿ ವಿವರಿಸಿದ್ದಾರೆ. `ಆರೋಪತರನ್ನು ಬಂಧಿಸಿ ತಮಗೆ ರಕ್ಷಣೆ ಕೊಡಬೇಕು’ ಎಂದವರು ಮನವಿ ಮಾಡಿದ್ದಾರೆ. ಈ ಎಲ್ಲಾ ವಿಷಯ ಆಲಿಸಿದ ಪೊಲೀಸರು ದರ್ಶನ್ ಮಾಜಾಳಿಕರ್ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
`ಶಾಂತಿ ಕಾಪಾಡಿ’