ದಾಂಡೇಲಿಯ ಬಿಬಿ ಜಹರಾ ಅವರ ಮನೆ ಮೇಲೆ ಮರ ಮುರಿದು ಬಿದ್ದಿದೆ. ಮರ ಮುರಿದ ರಭಸಕ್ಕೆ ಮನೆಯ ಛಾವಣಿ ಒಡೆದಿದ್ದು, ಮನೆಯೊಳಗಿದ್ದ ಬಿಬಿ ಜಹರಾ ಅವರ ತಲೆಗೆ ಗಾಯವಾಗಿದೆ.
ದಾಂಡೇಲಿಯ ಹಳಿಯಾಳ ರಸ್ತೆ ಅಂಚಿನಲ್ಲಿ ಮೆಹಬೂಬ್ ಕಾಕರ್ ಅವರು ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದಾರೆ. ಮನೆ ಅಂಚಿನ ಮರ ಅಪಾಯಕಾರಿಯಾಗಿರುವ ಬಗ್ಗೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಆರು ತಿಂಗಳ ಹಿಂದೆಯೇ ಅವರು ಲಿಖಿತ ಮನವಿ ಸಲ್ಲಿಸಿದ್ದಾರೆ. ಅದಾಗಿಯೂ, ಮರ ಕಟಾವಿಗೆ ಅವರಿಗೆ ಅನುಮತಿ ಸಿಕ್ಕಿಲ್ಲ. ಈ ನಡುವೆಯೇ ಆ ಮರದ ಟೊಂಗೆ ಮುರಿದಿದೆ. ಮುರಿದ ಟೊಂಗೆ ಮೆಹಬೂಬ್ ಕಾಕರ್ ಅವರ ಮನೆ ಮೇಲೆ ಬಿದ್ದು, ಮನೆಯೊಳಗಿದ್ದ ಅವರ ತಾಯಿ ಬಿಬಿ ಜಹರಾ ಅವರ ತಲೆಗೆ ಬಡಿದಿದೆ.
ಶನಿವಾರ ಬಿಬಿ ಜಹರಾ ಅವರು ಮನೆಯಲ್ಲಿ ಮಲಗಿದ ವೇಳೆ ಈ ದುರಂತ ನಡೆದಿದೆ. ಮರದ ಟೊಂಗೆ ಹಾಗೂ ಮನೆಯ ಮೇಲ್ಚಾವಣಿ ಮುರಿದು ಬಿದ್ದಿದ್ದರಿಂದ ಬಿಬಿ ಜಹರಾ ಅವರ ತಲೆಗೆ ಪೆಟ್ಟಾಗಿ ರಕ್ತ ಸುರಿದಿದೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ. `ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ. ಅರ್ಜಿ ಕೊಟ್ಟರೂ ಮರ ಕಟಾವು ನಡೆಸದ ಕಾರಣ ಅನಾಹುತ ನಡೆದಿದೆ’ ಎಂದು ಕುಟುಂಬದವರು ಹೇಳಿದ್ದಾರೆ.