ಶಿರಸಿಯ ಅಬ್ದುಲ್ ಕರಂ ಅವರು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ದುಡ್ಡು ಕೊಟ್ಟು ಅಕ್ಕಿ ಖರೀದಿಸಿ, ಅದೇ ಅಕ್ಕಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಅಬ್ದುಲ್ ಕರಂ ಅವರ ಮನೆ ಮುಂದೆ 10.75 ಕ್ವಿಂಟಾಲ್ ಅಕ್ಕಿ ದಾಸ್ತಾನು ಮಾಡಲಾಗಿದೆ.
ಶಿರಸಿಯ ಕಸ್ತೂರಿಬಾ ನಗರದ ಸೂಪಾ ಸರ್ಕಲ್ ಬಳಿ ಅಬ್ದುಲ್ ಕರಂ ಇಸ್ಮಾಯಲ್ ಲಕ್ನೋ ಅವರು ವಾಸವಾಗಿದ್ದಾರೆ. ಖಾಸಗಿ ಉದ್ಯೋಗದಲ್ಲಿರುವ ಅವರು ಅಲ್ಲಿಂದ ಬರುವ ಆದಾಯದ ಜೊತೆ ಹೆಚ್ಚುವರಿ ಹಣ ಮಾಡುವುದಕ್ಕಾಗಿ ಅಡ್ಡದಾರಿ ಹಿಡಿದಿದ್ದಾರೆ. ಇದಕ್ಕಾಗಿ ಅವರು ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಪಡೆದವರನ್ನು ಮಾತನಾಡಿಸಿ, ಅವರ ಬಳಿಯಿದ್ದ ಅಕ್ಕಿ ಸಂಗ್ರಹ ಮಾಡುತ್ತಾರೆ. ಬಡವರಿಗೆ ಹಣದ ಆಮೀಷ ಒಡ್ಡಿ ಅತ್ಯಂತ ಕಡಿಮೆ ಬೆಲೆಗೆ ಆ ಅಕ್ಕಿ ಖರೀದಿಸುತ್ತಾರೆ. ನಂತರ ಆ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಕಾಳ ಸಂತೆಯ ವ್ಯವಹಾರದಿಂಲೇ ಅಬ್ದುಲ್ ಕರಂ ಅವರು ಲಕ್ಷಾಂತರ ರೂ ಹಣ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿ ವಿತರಿಸುವ ಅಕ್ಕಿ ದುರುಪಯೋಗವಾಗುತ್ತಿರುವ ಬಗ್ಗೆ ಆಹಾರ ನಿರೀಕ್ಷಕಿ ಕವಿತಾ ಪಾಟಣಕರ್ ಅವರಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸುವಂತೆ ದೂರುದಾರರು ಹೇಳಿದ್ದು, ಅದರ ಪ್ರಕಾರ ಕವಿತಾ ಪಾಟಣಕರ್ ಅವರು ಜುಲೈ 25ರ ರಾತ್ರಿ ಅಬ್ದುಲ್ ಕರಿಂ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ, ಮನೆ ಮುಂದೆಯೇ 22 ಚೀಲದಲ್ಲಿ ದಾಸ್ತಾನು ಮಾಡಿದ್ದ ಸರ್ಕಾರಿ ಅಕ್ಕಿ ಕಾಣಿಸಿದೆ. ಕೂಡಲೇ ಅಧಿಕಾರಿಗಳು ಅದನ್ನು ವಶಕ್ಕೆಪಡೆದಿದ್ದಾರೆ.
ಈ ದಾಳಿ ನೋಡಿದ ಅಬ್ದುಲ್ ಕರಂ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾರೆ. ಅವರನ್ನು ಹುಡುಕಿ ಕಾನೂನು ಕ್ರಮ ಜರುಗಿಸುವುದಕ್ಕಾಗಿ ಕವಿತಾ ಪಾಟಣಕರ್ ಅವರು ಪೊಲೀಸ್ ದೂರು ನೀಡಿದ್ದಾರೆ.