ಪಾತ್ರೆ, ಸರಕು, ಸಾಮಗ್ರಿಗಳನ್ನು ಕಳ್ಳತನ ಮಾಡಿ ಬದುಕು ಕಟ್ಟಿಕೊಂಡಿದ್ದ ಅಂಕೋಲಾದ ವ್ಯಕ್ತಿಯೊಬ್ಬರು ಈಚೆಗೆ ಕರಿದೇವರ ಗುಡ್ಡದ ಕಲ್ಲುಗಳನ್ನು ಕದಿಯುತ್ತಿದ್ದಾರೆ. `ಕಳ್ಳ ಹುಂಜ’ ಖ್ಯಾತಿಯ ಆ ವ್ಯಕ್ತಿ ಸಣ್ಣಪುಟ್ಟ ಕಳ್ಳತನ ನಡೆಸಿದಾಗ ಊರಿನವರು ಹಿಡಿದು ಹೊಡೆದಿದ್ದರೂ ಕದಿಯುವ ಚಾಳಿ ಮಾತ್ರ ಬಿಟ್ಟಿಲ್ಲ.
ಅಂಕೋಲಾದ ಹಾರವಾಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆ ಕಾಮಗಾರಿಗಾಗಿ ಕಲ್ಬಂಡೆಗಳನ್ನು ಒಡೆಯಲಾಗುತ್ತದೆ. ಹೀಗೆ ಒಡೆದ ಕಲ್ಲುಗಳು ಖಾಸಗಿವ್ಯಕ್ತಿಯೊಬ್ಬರ ಪಾಲಾಗುತ್ತದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಲೆಕ್ಕ ಕೊಡದೇ ಗ್ರಾಮ ಪಂಚಾಯತದ ಮಾಜಿ ಸದಸ್ಯರೊಬ್ಬರು ಅದನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದಾರೆ. ಈ ಅಕ್ರಮದ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೆಗೆ ದೂರು ಸಲ್ಲಿಕೆಯಾಗಿದ್ದು, ಸದ್ಯ ಸ್ಥಳೀಯರು ಸಹ ಅಕ್ರಮ ನಡೆಸುವ ಕಳ್ಳ ಹುಂಜದ ಆಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆ ಕಂಪನಿ ಜೊತೆ ಕಲ್ಲು ಕಳ್ಳರು ಕಪ್ಪ ಕಾಣಿಕೆಯ ಒಪ್ಪಂದ ಮಾಡಿಕೊಂಡು ಈ ಅಕ್ರಮ ನಡೆಸುತ್ತಿರುವ ಆರೋಪವಿದೆ. ಇಲ್ಲಿನ ಕಲ್ಲು ಮಣ್ಣುಗಳನ್ನು ಅದೇ ಕಾಮಗಾರಿಗೆ ಬಳಸಬೇಕು ಎಂಬ ಸೂಚನೆಯಿದ್ದರೂ ಅದನ್ನು ಉಲ್ಲಂಘಿಸಿ ಬೇರೆ ಬೇರೆ ಕೆಲಸಗಳಿಗೆ ಮಾರಾಟ ಮಾಡುವ ದೂರಿದೆ. ಹಾರವಾಡ ಕರಿದೇವರ ಗುಡ್ಡದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕೋಟ್ಯಂತರ ರೂ ಮೌಲ್ಯದ ಕಲ್ಲು-ಬಂಡೆಗಳನ್ನು ಒಡೆಯಲಾಗಿದ್ದು, ರಾಜಾರೋಷವಾಗಿ ಅವುಗಳ ಸಾಗಾಟ ನಡೆದರೂ ಅದನ್ನು ಅಧಿಕಾರಿಗಳು ಪ್ರಶ್ನಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ.
`ಹಲವು ವರ್ಷಗಳಿಂದ ಕಲ್ಲು-ಮಣ್ಣು-ಬಂಡೆಗಳನ್ನು ಕಳ್ಳತನ ಮಾಡಿದವರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅನ್ನ ಕೊಡುವ ಭೂತಾಯಿಯನ್ನೇ ಒಡೆದು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮವಾಗಬೇಕು’ ಎಂದು ಆ ಭಾಗದ ಜನ ಒತ್ತಾಯಿಸಿದ್ದಾರೆ.