ಕಳೆದ ವರ್ಷ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನ ಅಸಭ್ಯ ವಿಡಿಯೋ ವೈರಲ್ ಮಾಡಿ ಪ್ರಸಿದ್ಧಿಪಡೆದಿದ್ದ ಅಂಕೋಲಾದ ಯುವತಿಯೊಬ್ಬರು ಇದೀಗ ಪ್ರಮುಖ ಸಮುದಾಯದರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿ ಪ್ರತಿಭಟನೆ ಎದುರಿಸಿದ್ದಾರೆ. ಆ ಯುವತಿಯ ವಿರುದ್ಧ ನೂರಾರು ಜನ ಸೇರಿ ಧರಣಿ ನಡೆಸಿದ್ದು, ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಅಂಕೋಲಾ ಪೊಲೀಸ್ ಠಾಣೆ ಎದುರು ಪ್ರತಿಭಟನೆಯನ್ನು ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಇತರರನ್ನು ಸೆಳೆಯುವುದಕ್ಕಾಗಿ ಯುವತಿಯೊಬ್ಬರು ಕೋಮಾರಪಂಥ ಜನ ಮಾತನಾಡುವ ಭಾಷೆಯನ್ನು ವ್ಯಂಗ್ಯ ಮಾಡಿದ್ದಾರೆ. ಆ ಭಾಷೆ ಬಳಸಿ ರೀಲ್ಸ್ ಮಾಡಿದ್ದು, ಅದು ಸಾಕಷ್ಟು ವಿರೋಧಕ್ಕೆ ವ್ಯಕ್ತವಾದ ಹಿನ್ನಲೆ ಡಿಲಿಟ್ ಮಾಡಿದ್ದಾರೆ. ಅದಾಗಿಯೂ, ಆ ಸಮುದಾಯದ ಜನ ಯುವತಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ. ವರ್ಷದ ಹಿಂದೆ ಇದೇ ಯುವತಿ ಅಂಕೋಲಾ-ಕಾರವಾರ ಮಾರ್ಗದ ಬಸ್ಸಿನಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ವಿಡಿಯೋ ಹರಿಬಿಟ್ಟಿದ್ದು, ನೆರೆ ರಾಜ್ಯದಲ್ಲಿ ವೈರಲ್ ವಿಡಿಯೋಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರ ತಾವು ಹರಿಬಿಟ್ಟ ವಿಡಿಯೋ ಡಿಲಿಟ್ ಮಾಡಿದ್ದರು.
ಸದ್ಯ ಅಂಥಹುದೇ ಇನ್ನೊಂದು ಸಾಹಸಕ್ಕೆ ಯುವತಿ ಮುಂದಾಗಿದ್ದು, ಅದಕ್ಕೆ ಭಾರೀ ಪ್ರಮಾಣದಲ್ಲಿ ವಿರೋಧವ್ಯಕ್ತವಾಗಿದೆ. ಆ ಸಮಾಜದ ಸದಸ್ಯರ ಭಾವನೆಗಳಿಗೆ ಧಕ್ಕೆ ಉಂಟಾಗುವ ಹಾಗೇ ರೀಲ್ಸ್ ಮಾಡಿದಲ್ಲದೇ ಯುವಕರನ್ನು ಸಹ ಕೆಟ್ಟದಾಗಿ ನಿಂದಿಸಿದ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದವರು ದೂರಿದ್ದಾರೆ. `ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಗೌರವಕ್ಕೆ ಧಕ್ಕೆ ತರುವ ರೀತಿಯ ಸಾಮಾಜಿಕ ಜಾಲತಾಣದ ದುರುಪಯೋಗವನ್ನು ಕಾನೂನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಪ್ರಮುಖರಾದ ಸಂಜಯ ನಾಯ್ಕ, ವಿಜಯಕುಮಾರ ನಾಯ್ಕ, ಗಣಪತಿ ನಾಯ್ಕ, ಚಂದ್ರಕಾAತ ನಾಯ್ಕ, ಮಾರುತಿ ನಾಯ್ಕ, ವಿನೋದ ನಾಯ್ಕ ಅವರು ಪ್ರತಿಭಟನೆ ಮುಂದಾಳತ್ವವಹಿಸಿದ್ದು, ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ನಂತರ ಆ ಯುವತಿ ವಿಡಿಯೋ ಡಿಲಿಟ್ ಮಾಡಿದ್ದಾರೆ.