ಮನೆ ಕೆಲಸ ಮಾಡಿಕೊಂಡಿದ್ದ ರೇಷ್ಮಾ ಶೆಟ್ಟಿ ಅವರು JCB ಆಪರೇಟರ್ ಆಗಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿಯಲ್ಲಿ ತರಬೇತಿ ಶಿಬಿರಕ್ಕೆ ಸೇರಿದ್ದಾರೆ.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ ಅನೇಕ ಬಗೆಯ ಸ್ವ ಉದ್ಯೋಗ ಅವಕಾಶಗಳ ತರಬೇತಿ ನೀಡುತ್ತದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಉದ್ಯೋಗ ಕಲ್ಪಿಸಿ ಅವರು ಸ್ವಾವಲಂಭಿಯಾಗಿ ಬದುಕುವಂತೆ ಮಾಡುವುದು ಈ ಸಂಸ್ಥೆಯ ಗುರಿ. ಹೀಗಾಗಿ ಇಲ್ಲಿ ಹೊಲಿಗೆ ತರಬೇತಿ, ಬ್ಯೂಟಿ ಪಾರ್ಲರ್ ಕಾರ್ಯಾಗಾರ, ಮೊಬೈಲ್ ಹಾಗೂ ಟಿವಿ ರಿಪೇರಿ, ಯಂತ್ರೊಪಕರಣಗಳ ಚಾಲನೆ ಹಾಗೂ ನಿರ್ವಹಣೆ ಸೇರಿ ವಿವಿಧ ವಿಷಯಗಳ ಕುರಿತು ಶಿಬಿರ ಆಯೋಜಿಸಲಾಗುತ್ತದೆ. ಏಳು ದಿನಗಳಿಂದ 30 ದಿನಗಳವರೆಗೆ ಉಚಿತ ಊಟ-ವಸತಿ ನೀಡಿ ತರಬೇತಿ ಆಯೋಜಿಸಲಾಗುತ್ತಿದ್ದು, ಈಚೆಗೆ ನಡೆಸಿದ ಭಾರೀ ಪ್ರಮಾಣದ ಯಂತ್ರೋಪಕರಣ ಚಾಲನೆ ತರಬೇತಿಯಲ್ಲಿ ದಾಂಡೇಲಿಯ ರೇಷ್ಮಾ ಶೆಟ್ಟಿ ಅವರು ಭಾಗಿಯಾಗಿದ್ದಾರೆ.
ಗೃಹಿಣಿಯಾಗಿರುವ ರೇಷ್ಮಾ ಶೆಟ್ಟಿ ಅವರು ಮೊದಲು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ಹೊರತುಪಡಿಸಿಯೂ ಬೇರೆ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಕೌಶಲ್ಯ ವೃದ್ದಿಸಿಕೊಳ್ಳುವ ಶಿಬಿರದ ಬಗ್ಗೆ ಅರಿತು ಅವರು ಅದರಲ್ಲಿ ಭಾಗವಹಿಸಲು ಆಸಕ್ತಿವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ರೇಷ್ಮಾ ಶೆಟ್ಟಿ ಅವರು ಸಕ್ರಿಯವಾಗಿದ್ದು, ಅವರಲ್ಲಿನ ಆಸಕ್ತಿ ಗಮನಿಸಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿಯವರು ಆಹ್ವಾನ ನೀಡಿದ್ದಾರೆ.
ಅದರಂತೆ, 30 ದಿನಗಳ ಕಾಲದ ಜೆಸಿಬಿ ಚಾಲಕನಾ ಶಿಬಿರಕ್ಕೆ ರೇಷ್ಮಾ ಶೆಟ್ಟಿ ಅವರು ಶಿಬಿರಾರ್ಥಿಯಾಗಿ ಸೇರಿದ್ದಾರೆ. 15 ದಿನಗಳಲ್ಲಿಯೇ ಅವರು ಜೆಸಿಬಿ ನಿರ್ವಹಣೆಯ ಆಳ-ಅಗಲ ಅರಿತಿದ್ದು ಸದ್ಯ ಆ ಭಾರೀ ವಾಹನವನ್ನು ಸಮರ್ಪಕವಾಗಿ ಚಲಾಯಿಸುವ ಅರಿವುಪಡೆದಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ 500ಕ್ಕೂ ಅಧಿಕ ಜನ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ ಮೂಲಕ ವಿವಿಧ ತರಬೇತಿಪಡೆದಿದ್ದು, ಅವರೆಲ್ಲರ ನಡುವೆ ರೇಷ್ಮಾ ಶೇಟ್ ಅವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.