ಕೊರ್ಲಕಟ್ಟಾದ ದೇಗುಲದ ಬಳಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿದ್ದು, ಪಾಲಕರ ಸಮಯಪ್ರಜ್ಞೆ ಹಾಗೂ ವೈದ್ಯರ ಶ್ರಮದಿಂದಾಗಿ ಆ ಬಾಲಕಿ ಜೀವಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಕೋರ್ಲಕಟ್ಟಾದ ಪ್ರತಿಕ್ಷಾ ನಾಯ್ಕ ಅವರು ಪಾಲಕರ ಜೊತೆ ಸಮೀಪದ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ಆಟವಾಡುತ್ತಿದ್ದ ಅವರಿಗೆ ತಲೆಭಾಗಕ್ಕೆ ಹಾವು ಕಚ್ಚಿತ್ತು. ಆ ಹಾವನ್ನು ಗಮನಿಸಿದಾಗ ಅದು ಕೊಳಕ ಮಂಡಲ ಎಂದು ಗೊತ್ತಾಯಿತು. ಅಪಾಯದ ಬಗ್ಗೆ ಅರಿತ ಪಾಲಕರು ಕೂಡಲೇ ಪ್ರತಿಕ್ಷಾ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಾಲ್ಕು ದಿನದ ಆರೈಕೆಯ ನಂತರ ಪ್ರತಿಕ್ಷಾ ನಾಯ್ಕ ಅವರು ಚೇತರಿಸಿಕೊಂಡಿದ್ದಾರೆ.
ಹಾವಿನ ಕಡಿತದಿಂದ ಬೆದರಿದ ಬಾಲಕಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿದಾಗ ಪೋಷಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರಿಂದ ವಿಷಯ ಗೊತ್ತಾಯಿತು. ಶಿರಸಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಹ ತ್ವರಿತ ರೀತಿಯಲ್ಲಿ ಸ್ಪಂದಿಸಿ ಬಾಲಕಿಯ ಜೀವ ಉಳಿಸಿದರು. ಸ್ಥಳದಲ್ಲಿದ್ದ ಮಕ್ಕಳ ತಜ್ಞ ಡಾ ಸಂದೀಪ ಹೆಗಡೆ ಅವರು ಬಾಲಕಿಯನ್ನು ಪರೀಕ್ಷಿಸಿ ತುರ್ತು ಚಿಕಿತ್ಸೆ ನೀಡಿದ್ದು, ಸದ್ಯ ಬಾಲಕಿ ಪ್ರತಿಕ್ಷಾ ನಾಯ್ಕ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.