ಕಾರವಾರದ ವಕೀಲರೆಲ್ಲರೂ ಕಾಡು ಅಧ್ಯಯನಕ್ಕೆ ಆಸಕ್ತಿವಹಿಸಿದ್ದು, ಜೀವ ವೈವಿಧ್ಯತೆ ರಕ್ಷಣೆಗಾಗಿ ಸಮಯ ಮೀಸಲಿಟ್ಟಿದ್ದಾರೆ. ಅಂಕೋಲಾ ತಾಲೂಕಿನ ಗುಂಡಬಾಳ ಅರಣ್ಯದಲ್ಲಿ ಈ ದಿನ ನ್ಯಾಯವಾದಿಗಳು ಚಾರಣ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ಅವರ ನೇತ್ರತ್ವದಲ್ಲಿ ವಕೀಲರು ಕಾಡಿನಲ್ಲಿ ಪಾದಯಾತ್ರೆ ನಡೆಸಿದ್ದಾರೆ. `ಮನ್ಸೂನ್ ವಾಕ್’ ಹೆಸರಿನ ಅಡಿ ವಕೀಲರು ಕಾಡು ಸಂಚಾರ ಮಾಡಿದ್ದಾರೆ. ಕಾಡಿನಲ್ಲಿರುವ ಅಪರೂಪದ ಗಿಡ ಮೂಲಿಕೆ, ಪ್ರಾಣಿ-ಪಕ್ಷಿ ಪ್ರಬೇದಗಳನ್ನು ಗುರುತಿಸಿದ್ದಾರೆ. ಅರಣ್ಯದ ಮಹತ್ವ, ಪಶ್ಚಿಮ ಘಟ್ಟದ ಅರಣ್ಯದ ವಿಶೇಷತೆಗಳ ಬಗ್ಗೆ ಎಲ್ಲರೂ ಒಟ್ಟಿಗೆ ಚರ್ಚಿಸಿದ್ದಾರೆ.
ಹಿರಿಯ ವಕೀಲ ಆರ್ ವಿ ಭಟ್ಟ ಅವರು ಕಾಡಿನಲ್ಲಿರುವ ವಿಶೇಷ ಸಂಗತಿಗಳ ಬಗ್ಗೆ ತಮ್ಮ ಬಳಗದವರಿಗೆ ವಿವರಿಸಿದ್ದಾರೆ. ಈ ಕಾಡಿಗೆ ಹೋಗುವ ಪೂರ್ವದಲ್ಲಿ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ವಕೀಲರು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಕಾಡಿನ ನಡುವೆ ಇದ್ದ ಮನೆಯಲ್ಲಿ ಸಭೆ ಸೇರಿದ ನ್ಯಾಯವಾದಿಗಳಿಗೆ ಹಿರಿಯ ವಕೀಲ ಬಿ ಎಸ್ ಪೈ ಅವರು ಪರಿಸರ ಪಾಠ ಮಾಡಿದ್ದಾರೆ. ಮತ್ತೊಬ್ಬ ನ್ಯಾಯವಾದಿ ಪಿ ಎಂ ನಾಯಕ ಅವರು ವಕೀಲರು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಅಲ್ಲಿಂದ ಕೋಗ್ರೆ ಗುಡ್ಡಕ್ಕೆ ಬಂದ ಈ ತಂಡದವರು ಟೆಂಪಲ್ ಟ್ರೀ ಎಂದು ಹೆಸರಾಗಿರುವ ಸಂಪಿಗೆ ಗಿಡ ನಾಟಿ ಮಾಡಿದ್ದಾರೆ. ಪುನಃ ಬಾಸಗೋಡಿನ ನಡುಬೇಣಕ್ಕೆ ಬಂದು ಅಲ್ಲಿ ಊರಿನವರ ಜೊತೆ ಬೆರೆತಿದ್ದಾರೆ. ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ ದೇಶಭಂಡಾರಿ, ಕಾರ್ಯಕಾರಿ ಸದಸ್ಯರಾದ ರಾಜೇಶ ಆಚಾರಿ, ಮಾರುತಿ ಬಿ ನಾಯ್ಕ್ ಮತ್ತು ದೀಪಾ ಎಸ್ ನಾಯ್ಕ್ ಅವರು ಕಾರ್ಯಕ್ರಮ ಸಂಘಟಿಸಿದ್ದು, ಹಿರಿಯ ವಕೀಲರಾದ ಕೆ ಬಿ ನಾಯ್ಕ್, ಸಂಜಯ ಸಾಳುಂಕೆ, ಎಂ ಎ ನಾಯ್ಕ್, ವಿನಾಯಕ ಎನ್ ನಾಯ್ಕ್, ವಿನೋದ ತೋಡುರ್ಕರ, ಡಿ ಏನ್ ನಾಯ್ಕ್, ಲಕ್ಷ್ಮಿ ರಾಣೆ, ಚರಣ ನಾಯ್ಕ, ಜೆ ಪಿ ನಾಯ್ಕ ಇತರರು ಚಾರಣದ ಖುಷಿ ಅನುಭವಿಸಿದ್ದಾರೆ.