ಮುಂಡಗೋಡಿನ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಯಲ್ಲಾಪುರದ ಸಚಿನ್ ರೇವಣಕರ್ ಅವರು ಆ ಸಾಲ ತೀರಿಸಲಾಗದೇ ಸಾವನಪ್ಪಿದ್ದಾರೆ. ಕಳೆನಾಶಕ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಯಲ್ಲಾಪುರದ ಶಿರನಾಳ ಬಳಿಯ ಬೊಮ್ಮನಳ್ಳಿಯಲ್ಲಿ ಸಚಿನ್ ಸದಾನಂದ ರೇವಣಕರ್ ಅವರು ವಾಸವಾಗಿದ್ದರು. 29 ವರ್ಷದ ಅವರು ಕುರಿ ಸಾಕಾಣಿಕೆ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಮುಂಡಗೋಡಿನ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಆದರೆ, ಕುರಿ ಸಾಕಾಣಿಕೆ ಅವರ ಕೈ ಹಿಡಿಯಲಿಲ್ಲ. ನಷ್ಟ ಅನುಭವಿಸಿದ ಕಾರಣ ಸಾಲ ಮರುಪಾವತಿ ಸಾಧ್ಯವಾಗಲಿಲ್ಲ.
ಸಾಲದ ಹೊರೆಯಿಂದಾಗಿ ಅವರು ಸರಾಯಿ ಮೊರೆ ಹೋದರು. ತಲೆಬಿಸಿ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ದುಶ್ಚಟದ ದಾಸರಾದರು. ಜುಲೈ 28ರಂದು ಅವರು ದುಡುಕು ನಿರ್ಧಾರಕ್ಕೆ ನಿರ್ಣಯಿಸಿದ್ದು, ತೋಟಕ್ಕೆ ಹೊಡೆಯಲು ತಂದಿದ್ದ ಕಳೆನಾಶಕ ಕುಡಿದರು. ಅಸ್ವಸ್ಥರಾಗಿದ್ದ ಅವರನ್ನು ಕುಟುಂಬದವರು ಕಿಮ್ಸ್’ಗೆ ದಾಖಲಿಸಿದರು. ಅದಾಗಿಯೂ, ಅಗಸ್ಟ 2ರಂದು ಅವರು ತಮ್ಮ ಉಸಿರು ನಿಲ್ಲಿಸಿದರು.