ಉತ್ತರ ಕನ್ನಡ ಜಿಲ್ಲೆಯ ವಿಶೇಷ ಅಪ್ಪೆಮಿಡಿಯ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೆಹಲಿಯಲ್ಲಿ ಮಾತನಾಡಿದ್ದಾರೆ. ಅಪ್ಪೆಮಿಡಿಯ ಸ್ವಾದ, ಋಚಿ ಹಾಗೂ ಅದರಿಂದ ಸಿದ್ಧಪಡಿಸುವ ಆಹಾರದ ಬಗ್ಗೆ ಕಾಗೇರಿ ಅವರು ಗುಣಗಾನ ಮಾಡಿದ್ದಾರೆ. ಅಪ್ಪೆಮಿಡಿಯ ಕಥೆ ಕೇಳಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಬಾಯಲ್ಲಿ ನೀರು ಬಂದಿದ್ದು, ಅಪ್ಪೆಮಿಡಿ ಉಪ್ಪಿನಕಾಯಿ ತಂದುಕೊಡುವುದಾಗಿ ಹೇಳಿ ಸಚಿವರನ್ನು ಅವರು ಸಮಾಧಾನ ಮಾಡಿದ್ದಾರೆ!
`ಈ ಎಲ್ಲದರ ಜೊತೆ ಮಲೆನಾಡು ಹಾಗೂ ಕರಾವಳಿ ಭಾಗದ ಹೆಮ್ಮೆಯ ಅಪ್ಪೆಮಿಡಿ ಮಾವಿನ ತಳಿಗೆ ಭಾರತೀಯ ಸಾಂಬಾರು ಮಂಡಳಿ (ಸ್ಪೈಸಸ್ ಬೋರ್ಡ್ ಆಫ್ ಇಂಡಿಯಾ) ಮಾನ್ಯತೆ ನೀಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು ಅಘನಾಶಿನಿ ಕಣಿವೆಯ ಅಪ್ಪೆಮಿಡಿ ಕುರಿತು ಅಧ್ಯಯನ ನಡೆಸಿರುವ ವೃಕ್ಷಲಕ್ಷ ಆಂದೋಲನ ಪ್ರತಿಯನ್ನು ನೀಡಿದ್ದಾರೆ. ಅನಂತ ಹೆಗಡೆ ಆಶೀಸರ, ಬಾಲಚಂದ್ರ ಸಾಯಿಮನೆ ಹಾಗೂ ಸ್ಪೈಸಸ್ ಬೋರ್ಡ್ ಸದಸ್ಯ ಪ್ರಸನ್ನ ಕೆರೆಕೈ ಅವರು ಸಲ್ಲಿಸಿದ ಮನವಿ ಪತ್ರವನ್ನು ಸಚಿವರಿಗೆ ಹಸ್ತಾಂತರ ಮಾಡಿದ್ದಾರೆ.
`ಅಪ್ಪೆಮಿಡಿಗೆ ಸ್ಪೈಸಸ್ ಬೋರ್ಡ್ ಮಾನ್ಯತೆ ದೊರೆತರೆ ಮಲೆನಾಡಿನ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ, ಬೆಂಬಲ ಬೆಲೆ ಹಾಗೂ ಹೊಸ ವ್ಯಾಪಾರ ಅವಕಾಶಗಳು ಲಭ್ಯವಾಗಲಿವೆ. ಅಲ್ಲದೆ, ಅಪ್ಪೆಮಿಡಿ ಉಪ್ಪಿನಕಾಯಿಗೆ ವಿದೇಶಿ ಮಾರುಕಟ್ಟೆ ವಿಸ್ತರಿಸಲು ಮತ್ತು ಭೌಗೋಳಿಕ ಸೂಚಕ (ಜಿಐ) ಮಾನ್ಯತೆ ಪಡೆಯಲು ಸಹಕಾರಿಯಾಗಲಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. `ಮಲೆನಾಡಿನ ಈ ವಿಶಿಷ್ಟ ಉತ್ಪನ್ನಕ್ಕೆ ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ದೊರಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.