ಬಾಚಣಕಿ ಭಾಗದ 24 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಚಣಕಿ ಅಣೆಕಟ್ಟಿನ ಉಪಕಾಲುವೆ ಬಳಿಯ ರೈತರ ಜಮೀನು ಪಹಣಿಯಲ್ಲಿ ಸದ್ಯ ಸರ್ಕಾರಿ ಹೆಸರು ಕಾಣುತ್ತಿದೆ. ಹೀಗಾಗಿ ಅಲ್ಲಿನವರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
`ಯಾವುದೇ ನೋಟಿಸ್ ನೀಡದೇ ನಮ್ಮ ಜಮೀನು ದಾಖಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಹೆಸರು ನಮೂದಿಸಲಾಗಿದೆ. ಆ ಮೂಲಕ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ್ ಅವರು ಆರೋಪಿಸಿದ್ದಾರೆ. `ರೈತರಲ್ಲಿ ಭಯ ಹುಟ್ಟಿಸಿರುವ ಮುಂಡಗೋಡ ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದವರು ಆಗ್ರಹಿಸಿದ್ದಾರೆ.
`ಸುಮಾರು 70 ವರ್ಷಗಳಿಂದ ಬಾಚಣಕಿ ಅಣೆಕಟ್ಟಿನ ನೀರಿನಿಂದ ಇಂದೂರು, ಕೂಸುರು ಸೇರಿದಂತೆ ವಿವಿಧ ಗ್ರಾಮಗಳ 2000 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ರೈತರು ಕೃಷಿ ಮಾಡುತ್ತಿದ್ದಾರೆ. ರೈತರಿಗೆ ಯಾವುದೇ ಪರಿಹಾರ ನೀಡದೆ ಈಗ ಜಮೀನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ’ ಎಂದವರು ಹೇಳಿದ್ದಾರೆ. `ಕಳೆದ ಮೂರು ದಿನಗಳಲ್ಲಿ 20ರಿಂದ 25 ರೈತರ ಪಹಣಿಯಲ್ಲಿ 2ರಿಂದ 10 ಗುಂಟೆಯವರೆಗೆ ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.
`500 ಎಕರೆ ವ್ಯಾಪ್ತಿಯಲ್ಲಿ ಕೇವಲ ಮೂವರು ರೈತರಿಗೆ ಮಾತ್ರ ನೋಟಿಸ್ ನೀಡಲಾಗಿದ್ದು, ಮೃತಪಟ್ಟ ರೈತನ ಹೆಸರಿಗೂ ನೋಟಿಸ್ ಜಾರಿಯಾಗಿದೆ’ ಎಂದು ರೈತ ಮಂಜುನಾಥ ನಡಿಗೇರಿ ಅವರು ದೂರಿದರು. `ತೆರವುಗೊಳಿಸಲು ಉದ್ದೇಶಿಸಿರುವ ಜಾಗದಲ್ಲಿ ಅಡಿಕೆ, ಬಾಳೆ ತೋಟಗಳ ಜೊತೆಗೆ ಮನೆ, ಶಾಲೆ ಸೇರಿದಂತೆ ಹಲವು ಕಟ್ಟಡಗಳಿವೆ. ಈ ಹಿಂದೆ ಭೂಸ್ವಾಧೀನ ನಡೆದಿದ್ದರೆ ದಾಖಲೆಗಳನ್ನು ಬಹಿರಂಗಪಡಿಸಬೇಕು. ಇಲ್ಲವಾದರೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ 2,000ಕ್ಕೂ ಹೆಚ್ಚು ರೈತರೊಂದಿಗೆ ಉಗ್ರ ಹೋರಾಟ ನಡೆಸುವೆ’ ಎಂದು ಎಚ್ಚರಿಸಿದರು. ರೈತ ಮುಖಂಡರಾದ ಸಿಕಂದರ ಬಂಕಾಪೂರ, ಅಶೋಕ ಸೂರಣ್ಣನವರ, ಪರಮೇಶ್ವರ ಸುಣಗಾರ, ಅಬ್ದುಲ್ ರೆಹಮಸಾಬ್ ಬಂಕಾಪೂರ, ಹನ್ಮಂತ ಕಣಕಣ್ಣನವರ ಇದ್ದರು.