ಮನೆ ಮನೆಗೆ ಭೇಟಿ ನೀಡುವ ಯಲ್ಲಪ್ಪ ಬಂಡಿ ಅವರು ಸರ್ಕಾರಿ ಅಕ್ಕಿ ಸಂಗ್ರಹಿಸುತ್ತಿದ್ದು, ಅವರ ಈ ಕಳ್ಳ ವ್ಯವಹಾರಕ್ಕೆ ಅಧಿಕಾರಿಗಳು ತಡೆ ಒಡ್ಡಿದ್ದಾರೆ. ಕಡಿಮೆ ಬೆಲೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಅವರ ಬಣ್ಣ ಬಯಲು ಮಾಡಿದ್ದಾರೆ.
ತಾವರಗೆರೆ ಗ್ರಾಮದ ಯಲ್ಲಪ್ಪ ಬಂಡಿ ಅವರು ಪಡಿತರ ಅಕ್ಕಿ ಸಂಗ್ರಹಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದರು. ಬಡವರಿಗೆ ಹಣದ ಆಮೀಷ ಒಡ್ಡಿ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ ನೀಡುವ ಅಕ್ಕಿಯನ್ನು ಅವರುಪಡೆಯುತ್ತಿದ್ದರು. ಆ ಅಕ್ಕಿಯನ್ನು ದುಬಾರಿ ಬೆಲೆಗೆ ಅವರು ಬೇರೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಪ್ರತಿ ತಿಂಗಳು ಪಡಿತರ ಅಕ್ಕಿ ವಿತರಣೆ ನಡೆದ ನಂತರ ಊರುರು ಅಲೆದಾಡಿ ಅವರು ಅಕ್ಕಿ ಸಂಗ್ರಹದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಯಲ್ಲಪ್ಪ ಬಂಡಿ ಅವರು ಸರ್ಕಾರಿ ಅಕ್ಕಿ ಮಾರಾಟ ಮಾಡುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯಿದ್ದು, ಅವರನ್ನು ಅಧಿಕಾರಿಗಳು ಹಿಂಬಾಲಿಸಿದ್ದರು. ಗುರುವಾರ 3 ಕ್ವಿಂಟಾಲ್’ಗೂ ಅಧಿಕ ಅಕ್ಕಿ ಸಂಗ್ರಹಿಸಿದ್ದ ಅವರ ಮೇಲೆ ಅಧಿಕಾರಿಗಳು ದಾಳಿ ಮಾಡಿದರು. ನಂದಿಗಟ್ಟಾ ಬಳಿ ಅಕ್ಕಿ ಸಂಗ್ರಹಿಸುತ್ತಿದ್ದ ಅವರು ಸಿಕ್ಕಿ ಬಿದ್ದಿದ್ದು ಕಂದಾಯ ನಿರೀಕ್ಷಕರಾದ ಪುನೀತ್ ಕುಮಾರ್, ಆಹಾರ ನಿರೀಕ್ಷಕರಾದ ಸಂಜು ಲಮಾಣಿ ಮತ್ತು ಲೆಕ್ಕಾಧಿಕಾರಿ ಶಿವರಾಜ ಸೇರಿ ಅವರನ್ನು ಸಾಕ್ಷಿ ಜೊತೆ ಹಿಡಿದರು.