`ಉತ್ತರ ಕನ್ನಡ ಜಿಲ್ಲೆಯ ರೈತರು ಜೀವನೋಪಾಯಕ್ಕಾಗಿ ನೆಟ್ಟ ಅಡಿಕೆ ಗಿಡಗಳನ್ನು ಅಧಿಕಾರಿಗಳು ಕೀಳಬಾರದು’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸೂಚಿಸಿದ್ದಾರೆ. `ನಾವು ಹೊಸ ಅತಿಕ್ರಮಣ ಬೆಂಬಲಿಸುವುದಿಲ್ಲ. ಆದರೆ, ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿದರೆ ಸುಮ್ಮನಿರುವುದಿಲ್ಲ’ ಎಂದು ಗಟ್ಟಿಯಾಗಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಲಕ್ಷಣ ಸವದಿ ಅವರು ಶುಕ್ರವಾರ ಶಿರಸಿಯಲ್ಲಿ ಸಭೆ ಮಾಡಿದ್ದು, ಈ ಸಭೆಯಲ್ಲಿ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ಅವರು ಅತಿಕ್ರಮಣದಾರರ ಪರವಾಗಿ ಧ್ವನಿ ಎತ್ತಿದ್ದಾರೆ. `ರೈತರು ತಮ್ಮ ಮನೆ ಸುತ್ತಮುತ್ತ ಜೀವನೋಪಾಯಕ್ಕಾಗಿ ನೆಟ್ಟಿರುವ ಅಡಕೆ ಗಿಡಗಳನ್ನು ಕೀಳಬಾರದು. ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಹೆಚ್ಚಿದ್ದು, ಅನೇಕ ಹಳ್ಳಿಗಳು ಅರಣ್ಯದ ಒಳಗಡೆಯೇ ಇವೆ. ಹೊಸ ಅತಿಕ್ರಮಣವನ್ನು ನಾವು ಬೆಂಬಲಿಸುವುದಿಲ್ಲ, ಆದರೆ ಹಳೆಯ ಅತಿಕ್ರಮಣದಾರರ ಮತ್ತು ರೈತರ ತಂಟೆಗೆ ಅರಣ್ಯ ಅಧಿಕಾರಿಗಳು ಹೋಗಿ ತೊಂದರೆ ನೀಡುವುದು ಸರಿಯಲ್ಲ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಶಿವರಾಮ ಹೆಬ್ಬಾರ್ ಅವರು `ಹಳೆಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಕೊಡಬೇಡಿ. ಕೃಷಿಕರು ಅರಣ್ಯ ಸಂರಕ್ಷಿಸಿಕೊAಡು ತಾವು ಬೆಳೆಯುತ್ತಿದ್ದಾರೆ. ಇಲ್ಲಿನ ರೈತರ ವಿಶ್ವಾಸಗಳಿಸದಿದ್ದರೆ ಅರಣ್ಯಕ್ಕೆ ಬೆಂಕಿ ಬಿದ್ದಾಗ ಆರಿಸಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಡಬೇಕು’ ಎಂದು ಹೇಳಿದರು.
ಈ ಸಭೆಯಲ್ಲಿ ಮಾತನಾಡಿದ ಸಚಿವರು `ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಉಂಟಾಗಿರುವ ಸಮಗ್ರ ಹಾನಿಯ ವಿವರವಾದ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಿ ಮೂರು ದಿನಗಳ ಒಳಗೆ ತಲುಪಿಸಿ’ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. `ರಾಜ್ಯದ ಕೆಲವೆಡೆ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದೆ. ಇನ್ನು ಕೆಲವೆಡೆ ಅನಾವೃಷ್ಟಿಯಿಂದ ಬರಗಾಲದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಪರಿಶೀಲನಾ ಸಭೆ ನಡೆಸಿ, ಹಾನಿಯ ನಿಖರ ಪಟ್ಟಿ ಸಿದ್ಧಪಡಿಸಲು ನಿರ್ದೇಶಿಸಿದ್ದಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ತಮ್ಮ ತಾಲೂಕು ವ್ಯಾಪ್ತಿಯ ಹಾನಿಯ ಸವಿಸ್ತಾರ ವರದಿಯ ಪ್ರತಿಗಳನ್ನು ಸಲ್ಲಿಸಬೇಕು’ ಎಂದು ಸಚಿವರು ಸೂಚಿಸಿದರು.
`ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗುತ್ತಿದ್ದು, ಜನತೆ ವಾರಗಟ್ಟಲೆ ಕತ್ತಲಿನಲ್ಲಿ ಕಳೆಯುತ್ತಿದ್ದಾರೆ. ಹೆಸ್ಕಾಂ ಅಧಿಕಾರಿಗಳು ನಗರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ನಿಗದಿತ ಅವಧಿಯ ಒಳಗಾಗಿ ಅದನ್ನು ಸರಿಪಡಿಸಬೇಕು ‘ ಎಂದು ಸೂಚಿಸಿದರು. ಕಾಲಮಿತಿಯೊಳಗೆ ವಿದ್ಯುತ್ ಪೂರೈಸಲು ವಿಳಂಬ ಮಾಡುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವಂತೆ ಹೆಸ್ಕಾಂ ಅಧಿಕಾರಿಗೆ ಸೂಚಿಸಿದರು. `ಶಾರ್ಟ್ ಸರ್ಕ್ಯೂಟ್ ತಡೆಯಲು ತಕ್ಷಣವೇ ಜಂಗಲ್ ಕಟಿಂಗ್ ಮಾಡಿಸಬೇಕು’ ಎಂದು ನಿರ್ದೇಶಿಸಿದರು. ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾಧಿಕಾರಿ ಕೆ ಲಕ್ಷೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಉಪವಿಭಾಗಾಧಿಕಾರಿ ಚಂದ್ರಶೇಖರ, ತಹಶೀಲ್ದಾರ್ ಪಟ್ಟರಾಜಗೌಡ ಇತರರು ಇದ್ದರು.