`ಮಂಕಾಳ ವೈದ್ಯರಿಗೆ ಸರ್ಕಾರ ಸಚಿವ ಸ್ಥಾನ ಕೊಟ್ಟು ನಂತರ ಕಸಿದುಕೊಂಡಿರುವುದು ಸರಿಯಾದ ಕ್ರಮವಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಬೇರೆ ಶಾಸಕರಿದ್ದರೂ ಅವರನ್ನು ಬಿಟ್ಟು ಹೊರ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದನ್ನು ಅವರು ಖಂಡಿಸಿದ್ದಾರೆ.
`ಉತ್ತರ ಕನ್ನಡದ ಜಾತಿವಾರು ಲೆಕ್ಕಾಚಾರದಲ್ಲಿ ಭೀಮಣ್ಣ ನಾಯ್ಕ, ದೀರ್ಘ ರಾಜಕೀಯ ಅನುಭವ ಹೊಂದಿರುವ ಹಿರಿಯರಾದ ಆರ್ ವಿ ದೇಶಪಾಂಡೆ, ಸುಶಿಕ್ಷಿತ ನಾಯಕರಾದ ಸತೀಶ್ ಸೈಲ್ ಅವರಂತಹ ಸಮರ್ಥ ಶಾಸಕರಿದ್ದಾರೆ. ಮಂಕಾಳು ವೈದ್ಯ ಅವರು ಸಮರ್ಥತೆ ಬಗ್ಗೆ ಸರ್ಕಾರ ತೀರ್ಮಾನಿಸಿದರೂ, ಉಳಿದವರನ್ನು ಕಡೆಗಣಿಸಿದ್ದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಉತ್ತರ ಕನ್ನಡವು ಸೂಕ್ಷ್ಮ ಗಡಿ ಜಿಲ್ಲೆಯಾಗಿದ್ದು, ಭಾಷಾ ಸಮಸ್ಯೆಗಳು, ಕೈಗಾರಿಕೆಗಳ ಕೊರತೆ, ಉದ್ಯೋಗ ಸೃಷ್ಟಿಯ ತುರ್ತು, ಪದೇ ಪದೇ ಎದುರಾಗುವ ಅತಿವೃಷ್ಟಿ ನಿರ್ವಹಣೆ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳ ಅಭಾವ ಮತ್ತು ಗುಡ್ಡಗಾಡು ಪ್ರದೇಶಗಳ ಶಿಕ್ಷಣ ಹಾಗೂ ಮೂಲಸೌಕರ್ಯದಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸೂಕ್ಷ್ಮ ವಿಷಯಗಳ ಅರಿವಿರುವ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಕೊಡದೆ ಬೆಳಗಾವಿ ಜಿಲ್ಲೆಯವರಿಗೆ ಉಸ್ತುವಾರಿ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.
`ಒಂದು ವೇಳೆ ನಮ್ಮ ಜಿಲ್ಲೆಯ ಶಾಸಕರನ್ನು ಸಚಿವರನ್ನಾಗಿ ಮಾಡಿ ಬೆಳಗಾವಿಗೆ ಉಸ್ತುವಾರಿಯನ್ನಾಗಿ ನೇಮಿಸಿದರೆ ಅಲ್ಲಿಯವರು ಒಪ್ಪುತ್ತಾರೆಯೇ? ಉತ್ತರ ಕನ್ನಡ ಶಾಂತಿಯುತ ಜಿಲ್ಲೆ ಎನ್ನುವ ಏಕೈಕ ಕಾರಣಕ್ಕೆ ಪ್ರತಿಯೊಂದು ಹಂತದಲ್ಲೂ ವಂಚನೆಗೊಳಗಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ಇತ್ತೀಚೆಗೆ ಕಾರವಾರ ಶಾಸಕ ಸತೀಶ್ ಸೈಲ್ ಅವರು ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದು ಸಂಪೂರ್ಣ ನಿಜವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ನಮ್ಮವರೇ ನಮ್ಮವರ ಕಾಲೆಳೆಯುವ ಸಂಸ್ಕೃತಿ ಬೆಳೆದಿದೆ. ಸರ್ಕಾರ ತಕ್ಷಣವೇ ಈ ತಾರತಮ್ಯವನ್ನು ಸರಿಪಡಿಸಿ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ಜವಾಬ್ದಾರಿಯನ್ನು ನೀಡಬೇಕು’ ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ.