ಯಲ್ಲಾಪುರ ತಾಲೂಕಿನಲ್ಲಿ ಕೇಬಲ್ ಕಳ್ಳರ ಕಾಟ ಹೆಚ್ಚಾಗಿದೆ. ಕಂಡ ಕಂಡ ಕೇಬಲುಗಳಿಗೆಲ್ಲ ಕಳ್ಳರು ಕೈ ಹಾಕುತ್ತಿದ್ದಾರೆ.
ಉಮ್ಮಚ್ಗಿ ಬಳಿಯ ಕೋಟೆಮನೆ ಬಳಿ ಮೂರು ದಿನದ ಹಿಂದೆ ಬಿಎಸ್‌ಎನ್‌ಎಲ್ ಕೇಬಲ್ ಕಳ್ಳರ ಪಾಲಾಗಿತ್ತು. ಸದ್ಯ ಉಮ್ಮಚ್ಗಿಯ ಸುರಬೈಲ್ ಗ್ರಾಮದ ಸಿದ್ದಿ ಕಾಲೋನಿಯ ಬೋರ್‌ವೆಲ್’ಗೆ ಅಳವಡಿಸಿದ್ದ ಕೇಬಲ್ ಕಳ್ಳರ ಪಾಲಾಗಿದೆ. ಸಣ್ಣಪುಟ್ಟ ಕೇಬಲ್ ಜೊತೆ ಲಕ್ಷಾಂತರ ಮೌಲ್ಯದ ಕೇಬಲ್ ಸಹ ಕಳ್ಳರ ಪಾಲಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ.
ರಾತ್ರಿ ವೇಳೆ ಕೋಟೆಮನೆ ಬಳಿ ಕೇಬಲ್ ಕದ್ದದ್ದು ಪರಾರಿಯಾಗುತ್ತಿದ್ದ ಕೆಲವರನ್ನು ಊರಿನವರು ಹಿಡಿದಿದ್ದರು. ವಾಹನವೊಂದರಲ್ಲಿ ಕೇಬಲ್ ಒಯ್ಯುತ್ತಿರುವವರನ್ನು ಅಡ್ಡ ಹಾಕಿದಾಗ ಅವರು ಕ್ಷಮೆ ಕೋರಿದ್ದರು. ಆಗ, ಊರಿನವರು ಕಳ್ಳರ ವಿಡಿಯೋ ಮಾಡಿ, ನಂತರ ಅವರನ್ನು ಬಿಟ್ಟು ಕಳುಹಿಸಿದ್ದರು. ಅದರ ಬೆನ್ನಲ್ಲೆ ಇದೀಗ ಮತ್ತೊಂದು ಕೇಬಲ್ ಕಳ್ಳತನ ನಡೆದಿದ್ದು, ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಬೋರ್‌ವೆಲ್ ಕೇಬಲ್ ಕಳ್ಳತನದ ಬಗ್ಗೆ ಗ್ರಾಮ ಪಂಚಾಯತದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
`ಮಾಡಲು ಕೆಲಸವಿಲ್ಲದ ಕೆಲ ಕಿಡಿಗೇಡಿಗಳು ಪುಡಿಗಾಸಿಗಾಗಿ ಇಂಥ ಕಳ್ಳತನ ಮಾಡುತ್ತಿದ್ದಾರೆ. ಮೊದಲು ಸಣ್ಣಪುಟ್ಟ ಕಳ್ಳತನ ಮಾಡಿದವರನ್ನು ಜನ ಕ್ಷಮಿಸಿ, ಕ್ಷಮಿಸಿ ಇದೀಗ ಅವರೇ ದೊಡ್ಡ ಕಳ್ಳತನದ ಸಾಹಸ ಮಾಡುವ ಸಾಧ್ಯತೆಯಿದೆ. ಹೀಗಾಗಿ ಜನ ಜೀವನಕ್ಕೆ ಸಮಸ್ಯೆ ಮಾಡುವವರಿಗೆ ಸರಿಯಾಗಿ ಶಿಕ್ಷಿಸಬೇಕು’ ಎಂದು ಅಲ್ಲಿನವರು ಹೇಳಿದ್ದಾರೆ.