ಗ್ರಾಹಕರ ಖಾತೆಯಿಂದ ಅನಗತ್ಯ ಹಣ ಕಡಿತ ಮಾಡಿದ HDFC ಬ್ಯಾಂಕಿಗೆ ಗ್ರಾಹಕ ಆಯೋಗ 50 ಸಾವಿರ ರೂ ದಂಡ ವಿಧಿಸಿದೆ. ನಿಯಮಗಳನ್ನು ಉಲ್ಲಂಘಿಸಿ 4071ರೂ ಕಡತ ಮಾಡಿದ ಕಾರಣ ಶಿರಸಿಯ HDFC ಬ್ಯಾಂಕ್ 50 ಸಾವಿರ ರೂ ಪಾವತಿಸಬೇಕಿದೆ.
ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಯಿದೆ. ಈ ಬ್ಯಾಂಕಿನಲ್ಲಿ ವಕೀಲ ಶ್ರೀನಿವಾಸ ಕೃಷ್ಣ ನಾಯ್ಕ ಅವರು ಖಾತೆ ಹೊಂದಿದ್ದಾರೆ. ಶ್ರೀನಿವಾಸ ಕೃಷ್ಣ ನಾಯ್ಕ ಅವರು ಪ್ರತಿ ತಿಂಗಳು 2 ಸಾವಿರ ರೂ ಎಸ್ ಐ ಪಿ ಮಾಡುವಂತೆ ಬ್ಯಾಂಕಿನವರಿಗೆ ಸೂಚಿಸಿದ್ದು, ಎಸ್ ಐ ಪಿ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಎಂಬ ಕಾರಣ ನೀಡಿ ಬ್ಯಾಂಕಿನವರು ದಂಡ ವಿಧಿಸಿದ್ದಾರೆ. ಆದರೆ, ವಿಧಿಸಿದ ದಂಡ ಕ್ರಮಬದ್ಧವಾಗಿರದೇ ಅನೇಕ ವ್ಯತ್ಯಾಸಗಳಿಂದ ಕೂಡಿರುವುದನ್ನು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಗಮನಿಸಿದೆ. 9 ಬಾರಿ ದಂಡ ವಿಧಿಸಿದನ್ನು ಮನಗಂಡ ಆಯೋಗ ಎಚ್ ಡಿ ಎಫ್ ಸಿ ಬ್ಯಾಂಕಿಗೆ ದುಬಾರಿ ದಂಡ ವಿಧಿಸಿದೆ. ಜೊತೆಗೆ ಗ್ರಾಹಕರಾಗಿದ್ದ ಶ್ರೀನಿವಾಸ ಕೃಷ್ಣ ನಾಯ್ಕ ಅವರಿಗೂ ಯೋಗ್ಯ ಪರಿಹಾರ ನೀಡುವಂತೆ ಸೂಚಿಸಿದೆ.
2023ರಲ್ಲಿ ಶ್ರೀನಿವಾಸ ಕೃಷ್ಣ ನಾಯ್ಕ ಅವರ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿಗೆ ಪತ್ರ ಬರೆದು, ನೋಟಿಸ್ ನೀಡಿದಾಗ ಬ್ಯಾಂಕಿನವರು ಆ ಹಣ ಮರಳಿಸುವ ಭರವಸೆ ನೀಡಿದ್ದಾರೆ. ಆದರೆ, ಹೆಚ್ಚುವರಿ ಕಡಿತ ಮಾಡಿದ ಹಣವನ್ನು ಮರಳಿಸಿಲ್ಲ. ಆರ್ ಬಿ ಐ ನಿಯಮಾನುಸಾರ ಹಣಕಡತ ಮಾಡಿರುವುದಾಗಿ ಬ್ಯಾಂಕಿನವರು ವಾದ ಮಂಡಿಸಿದ್ದು, ಗ್ರಾಹಕ ವೇದಿಕೆ ಅದನ್ನು ಅಲ್ಲಗಳೆದಿದೆ. ನಿಯಮಾವಳಿ ಉಲ್ಲಂಘಿಸಿ ದಂಡ ವಿಧಿಸಿರುವುದಾಗಿ ಆಯೋಗ ಹೇಳಿದ್ದು, 4071ರೂ ಹೆಚ್ಚುವರಿ ಕಡತ ಮಾಡಿದಕ್ಕಾಗಿ ಗ್ರಾಹಕ ಶ್ರೀನಿವಾಸ ಕೃಷ್ಣ ನಾಯ್ಕ ಅವರಿಗೆ 15 ಸಾವಿರ ರೂ ಪರಿಹಾರ ಹಾಗೂ 5 ಸಾವಿರ ರೂ ಖರ್ಚು ಕೊಡಬೇಕು ಎಂದು ಸೂಚಿಸಿದೆ. ಅದರೊಂದಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಬ್ಯಾಂಕು 30 ಸಾವಿರ ರೂ ಗ್ರಾಹಕ ಕಲ್ಯಾಣ ಖಾತೆಗೆ ಜಮಾ ಮಾಡಬೇಕು ಎಂದು ಸೂಚಿಸಿದೆ.