ಧಾರಾಕಾರ ಮಳೆಯಲ್ಲಿ ಪ್ಲಾಸ್ಟಿಕ್ ಹೊದ್ದು ಮಲಗಿದ್ದ ಮಹಿಳೆಯೊಬ್ಬರಿಗೆ ದಬ್ಬೆಸಾಲು ಗ್ರಾಮದ ಜನ ಆಸರೆಯಾಗಿದ್ದಾರೆ. ದಟ್ಟ ಕಾಡಿನ ಹುಲ್ಲು-ಪೊದೆಗಳ ನಡುವೆ ರಾತ್ರಿ ವೇಳೆ ನಲುಗಿ ಹೋಗಿದ್ದ ವೃದ್ಧೆಯನ್ನು ರಕ್ಷಿಸಿ ಆಶ್ರಮಕ್ಕೆ ಕಳುಹಿಸಿದ್ದಾರೆ.
ಯಲ್ಲಾಪುರದ ಬಳಗಾರ ಬಳಿಯ ದಬ್ಬೆಸಾಲಿನ ಕಾಡಿನಲ್ಲಿ ಅಗಸ್ಟ 7ರ ರಾತ್ರಿ ವೃದ್ಧೆಯೊಬ್ಬರು ಪ್ರತ್ಯಕ್ಷರಾಗಿದ್ದರು. ಧಾರಾಕಾರ ಮಳೆ ಸುರಿಯುತ್ತಿದ್ದರೂ ಅದೇ ಕಾಡಿನಲ್ಲಿ ಅವರು ಪ್ಲಾಸ್ಟಿಕ್ ಹೊದ್ದು ಮಲಗಿದ್ದರು. ದಾಂಡೇಲಿಗೆ ಹೋದವ ವಿನಾಯಕ ಭಟ್ಟ ಹಳೆಮನೆ ಕುಟುಂಬದವರು ಆ ಮಹಿಳೆಯನ್ನು ನೋಡಿದ್ದು, ಕೂಡಲೇ ರಾಘವೇಂದ್ರ ಗಾಂವ್ಕರ್ ದಬ್ಬೆಸಾಲ್ ಅವರಿಗೆ ಮಾಹಿತಿ ನೀಡಿದರು. ರಾತ್ರಿ 12 ಗಂಟೆ ವೇಳೆಗೆ ರಾಘವೇಂದ್ರ ಗಾಂವ್ಕರ್ ಅವರು ಮಹಿಳೆಯಿದ್ದ ಸ್ಥಳ ಹುಡುಕಿ ಹೊರಟಿದ್ದು, ಆಕೆಯ ಮನವೊಲೈಸಿ ಮನೆಗೆ ಕರೆತರುವ ಪ್ರಯತ್ನ ಮಾಡಿದರು. ಆದರೆ, ಆ ಮಹಿಳೆ ಕಾಡು ಬಿಟ್ಟು ಬರುವ ಮನಸ್ಥಿತಿಯಲ್ಲಿರಲಿಲ್ಲ.
ಹೀಗಾಗಿ, ರಾಘವೇಂದ್ರ ಗಾಂವ್ಕರ್ ಅವರು ಕುಟುಂಬ ಸದಸ್ಯರಾದ ಅಂಜನಾ ಗಾಂವ್ಕರ್, ಕಾವೇರಿ ಗಾಂವ್ಕರ್, ಶ್ರೀಪಾದ ಗಾಂವ್ಕರ್ ಅವರ ನೆರವುಪಡೆದು ವೃದ್ಧೆಯಿದ್ದ ಸ್ಥಳದಲ್ಲಿಯೇ ಚಪ್ಪರ ಕಟ್ಟಿದರು. ಬೆಳಗಾಗುವವರೆಗೂ ವೃದ್ಧೆಗೆ ಅಪಾಯ ಎದುರಾಗದ ಹಾಗೇ ಕಾದರು. ನಸುಕಿನ ವೇಳೆ ಆ ವೃದ್ಧೆಯೇ ರಾಘವೇಂದ್ರ ಗಾಂವ್ಕರ್ ಅವರ ಮನೆಗೆ ಆಗಮಿಸಿದ್ದು, ಮನೆ ಜಗಲಿಯಲ್ಲಿ ಇಡೀ ದಿನ ನಿದ್ರಿಸಿದರು. ಆಯಾಸಗೊಂಡ ವೃದ್ಧೆ ಚೇತರಿಸಿಕೊಂಡ ನಂತರ ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಆದರೆ, ಆ ಮಹಿಳೆ ಮರಾಠಿ ಮಾತನಾಡುತ್ತಿದ್ದು, ಅವರ ಭಾಷೆ ಇವರಿಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮರಾಠಿ ಬಲ್ಲವರೊಬ್ಬರನ್ನು ಕರೆಯಿಸಿ ಆಕೆಯ ಬಗ್ಗೆ ವಿಚಾರಿಸಿದರು. ಆಕೆ, ಹಸಿವು ಎಂದ ತಕ್ಷಣ ಬಿಸಿ ಬಿಸಿ ಅಡುಗೆ ಮಾಡಿ ಬಡಿಸಿದರು.
ಅದಾದ ನಂತರ ಆ ವೃದ್ಧೆ ತನ್ನನ್ನು ಖಾನಾಪುರ ಬಾಂದೇಕರವಾಡದ ವಿಠ್ಠಾಬಾಯಿ ಶಾಸ್ತಿ ಎಂದು ಪರಿಚಯಿಸಿಕೊಂಡರು. `ಗಂಗಾರಾಮ ಹಾಗೂ ಲಕ್ಷಣ ಎಂಬ ಮಕ್ಕಳಿದ್ದು, ಅವರು ಮನೆಯಿಂದ ಹೊರದಬ್ಬಿದ ಕಾರಣ ಹೀಗಾಗಿದ್ದೇನೆ’ ಎಂದು ಹೇಳಿದರು. ವೃದ್ಧೆಯ ಅಸಹಾಯಕತೆ ನೋಡಿದ ಕುಟುಂಬದವರು 112 ಸಹಾಯವಾಣಿಗೆ ಫೋನ್ ಮಾಡಿದರು. ದುರ್ಗಮ ಕಾಡು ದಾರಿಯಲ್ಲಿ ಪೊಲೀಸ್ ವಾಹನ ಹಾಗೂ ಆಂಬುಲೆನ್ಸ್ ಸಹ ಬಾರದ ಸ್ಥಿತಿಯಿದ್ದ ಕಾರಣ ಪಿಕಪ್ ಒಂದನ್ನು ಬಾಡಿಗೆಗೆಪಡೆದು ಅದರಲ್ಲಿ ವೃದ್ಧೆಯನ್ನು ಬಳಗಾರಿನವರೆಗೆ ಕರೆದೊಯ್ದರು.
ಬಳಗಾರಿನಿಂದ ಯಲ್ಲಾಪುರದವರೆಗೆ ವೃದ್ಧೆಯನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಹಾಗೂ ಇತರರು ಸೇರಿ ಆ ವೃದ್ಧೆಯನ್ನು ಆಂಬುಲೆನ್ಸ್ ಮೂಲಕ ಅನಾಥ ಆಶ್ರಮಕ್ಕೆ ಸಾಗಿಸಿದರು. ಸದ್ಯ ನಾಯ್ಕನಕರೆಯ ರಾಘವೇಂದ್ರ ಆಶ್ರಮದಲ್ಲಿ ಅವರು ಆಶ್ರಯಪಡೆದಿದ್ದಾರೆ.