ಶಿರವಾಡದ ಬಂಗಾರಪ್ಪ ನಗರದಲ್ಲಿದ್ದ ಶರತ್ ವಡ್ಡರ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಮಗನಿಗೆ ಆದ ನೋವು ಸಹಿಸಲಾಗದೇ ಅವರ ತಾಯಿ ವಿಜಯಾ ವಡ್ಡರ್ ಅವರು ನೇಣಿಗೆ ಶರಣಾಗಿದ್ದಾರೆ. ವಿಜಯ ವಡ್ಡರ್ ಅವರ ಸಾವಿನಿಂದ ಕಂಗಾಲಾದ ಅವರ ಪತಿ ವೆಂಕಟೇಶ್ ವಡ್ಡರ್ ಅವರು ನದಿಗೆ ಹಾರಿ ಪ್ರಾಣ ಬಿಟ್ಟಿದ್ದು, ತಂದೆ-ತಾಯಿ ಆತ್ಮಹತ್ಯೆಯಿಂದ ಶರತ್ ವಡ್ಡರ್ ಅವರು ತಬ್ಬಲಿಯಾಗಿದ್ದಾರೆ.
ಒಂದುವರೆ ತಿಂಗಳ ಹಿಂದೆ ಶರತ್ ವಡ್ಡರ್ (10) ಅವರು ಬೈಕಿನಲ್ಲಿ ಹಿಂದೆ ಕೂತು ಸವಾರಿ ಮಾಡುತ್ತಿದ್ದರು. ಆ ಬೈಕ್ ಸ್ಕಿಡ್ ಆಗಿದ್ದರಿಂದ ಶರತ್ ವಡ್ಡರ್ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು ಆಪರೇಶನ್ ಮಾಡಿದ್ದರು. ಶರತ್ ವಡ್ಡರ್ ಅವರ ತಲೆಯೊಳಗಿನ ಸಣ್ಣ ಮೂಳೆಯನ್ನು ವೈದ್ಯರು ತೆಗೆದಿದ್ದು, 18 ವರ್ಷದ ನಂತರ ಇನ್ನೊಂದು ಆಪರೇಶನ್ ಮಾಡಬೇಕು ಎಂದು ಸೂಚಿಸಿದ್ದರು.
ಮಗನಿಗೆ ಆದ ಅಪಘಾತದಿಂದ ವಿಜಯಾ ವಡ್ಡರ್ (36) ಅವರು ನೊಂದಿದ್ದರು. ಮಗನಿಗೆ ಮತ್ತೊಂದು ಆಪರೇಶನ್ ಮಾಡಿಸಬೇಕು ಎಂದು ತಿಳಿದು ಮಾನಸಿಕವಾಗಿಯೂ ಕುಗ್ಗಿದ್ದರು. ಇದೇ ವಿಷಯವಾಗಿ ವಿಜಯ ವಡ್ಡರ್ ಹಾಗೂ ಅವರ ಪತಿ ವೆಂಕಟೇಶ ವಡ್ಡರ್ (38) ಅವರ ನಡುವೆ ಮಾತಿಗೆ ಮಾತು ಆಗುತ್ತಿತ್ತು. ಕೊನೆಗೆ ವೆಂಕಟೇಶ್ ವಡ್ಡರ್ ಅವರೇ ಪತ್ನಿಯನ್ನು ಸಮಾಧಾನ ಮಾಡುತ್ತಿದ್ದರು. ವಿಜಯಾ ವಡ್ಡರ್ ಅವರಿಗೆ ಅವರ ತಾಯಿ ರತ್ನಾ ರೆಡ್ಡಿ ಅವರು ಸಂತೈಸುತ್ತಿದ್ದರು. ಅದಾಗಿಯೂ, ಸಮಾಧಾನವಾಗದ ವಿಜಯಾ ವಡ್ಡರ್ ಅವರು ಅಗಸ್ಟ 9ರ ರಾತ್ರಿ ನೇಣಿಗೆ ಶರಣಾದರು. ಆ ರಾತ್ರಿಯೇ ಕುಟುಂಬದವರು ವಿಜಯಾ ವಡ್ಡರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರೊಳಗೆ ಅವರು ಶವವಾಗಿದ್ದರು.
ಪತ್ನಿ ಸಾವನಪ್ಪಿರುವ ವಿಷಯ ಅರಿತ ವೆಂಕಟೇಶ್ ವಡ್ಡರ್ ಅವರು ಮಾನಸಿಕವಾಗಿ ಜರ್ಜರಿತರಾದರು. `ತಾನೂ ಸಾಯುವೆ’ ಎಂದು ಕಿರುಚಿ ಆಸ್ಪತ್ರೆಯಿಂದ ಓಡಿದರು. ಸಾಕಷ್ಟು ಹುಡುಕಾಟ ನಡೆಸಿದರೂ ವೆಂಕಟೇಶ ವಡ್ಡರ್ ಅವರು ಸಿಗಲಿಲ್ಲ. ಈ ದಿನ ವೆಂಕಟೇಶ್ ವಡ್ಡರ್ ಅವರ ಶವವೂ ಕಾಳಿ ನದಿ ತಟದಲ್ಲಿ ಕಾಣಿಸಿದ್ದು, ತಂದೆ-ತಾಯಿ ಮರಣದಿಂದ ಶರತ್ ವಡ್ಡರ್ ಅವರು ತಬ್ಬಲಿಯಾಗಿದ್ದಾರೆ.