ಹೊಟೇಲ್ ವ್ಯಾಪಾರ ನಡೆಸುವ ಸ್ಪೂರ್ತಿ ದೇವಾಡಿಗ ಅವರಿಗೆ ಅವರ ಪತಿ ಅಕ್ಷಯ ದೇವಾಡಿಗ ಅವರಿಂದಲೇ ಆತಂಕ ಎದುರಾಗಿದೆ. ಅಕ್ಷಯ ದೇವಾಡಿಗ ಅವರು ಸ್ಪೂರ್ತಿ ದೇವಾಡಿಗ ಅವರ ತಂದೆಗೆ ಪದೇ ಪದೇ ಫೋನ್ ಮಾಡಿ ತೊಂದರೆ ಕೊಡುತ್ತಿದ್ದಾರೆ.
ಶಿರಸಿಯ ಬನವಾಸಿ ರಸ್ತೆಯ ನಿರ್ಮಲ ನಗರದಲ್ಲಿ ಸ್ಪೂರ್ತಿ ದೇವಾಡಿಗ ಅವರು ವಾಸವಾಗಿದ್ದಾರೆ. 27 ವರ್ಷದ ಅವರು ಹೊಟೇಲ್ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ. ಸ್ಪೂರ್ತಿ ದೇವಾಡಿಗ ಅವರ ನೆಮ್ಮದಿಗೆ ಅವರ ಪತಿ ಅಕ್ಷಯ ದೇವಾಡಿಗ ಅವರೇ ಮಾರಕವಾಗಿದ್ದಾರೆ. ಗಣೇಶ ನಗರದಲ್ಲಿ ವಾಸಿಸುವ ಅಕ್ಷಯ ದೇವಾಡಿಗ ಅವರು ಬ್ಯುಸಿನೆಸ್ ಮಾಡಿಕೊಂಡಿದ್ದು, ಅದಾಗಿಯೂ ಹಣಕ್ಕಾಗಿ ಸ್ಪೂರ್ತಿ ದೇವಾಡಿಗ ಅವರ ತಂದೆಗೆ ಗಂಟು ಬಿದ್ದಿದ್ದಾರೆ.
ಅಕ್ಷಯ ದೇವಾಡಿಗ ಅವರು ತಮ್ಮ ಮಾವನಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ಕೊಡದೇ ಇದ್ದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ. ಜೊತೆಗೆ ಅತ್ಯಂತ ಕೆಟ್ಟ ಶಬ್ದಗಳಿಂದ ಮಾವನಿಗೆ ನಿಂದಿಸಿ, ಅವಮಾನ ಮಾಡಿದ್ದಾರೆ. ತಂದೆಗೆ ಆದ ಅವಮಾನ ಸಹಿಸದ ಸ್ಪೂರ್ತಿ ದೇವಾಡಿಗ ಅವರು ಕೋರ್ಟಿನ ಮೆಟ್ಟಿಲೇರಿದ್ದಾರೆ. ಪತಿಯಿಂದ ತಮ್ಮ ಹೊಟೇಲ್ ಉದ್ದಿಮೆಗೂ ತೊಂದರೆ ಆಗಬಹುದು ಎಂದು ಭಾವಿಸಿ ಅವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
`ದುಡ್ಡಿಗಾಗಿ ಕಾಡಿಸುತ್ತಿರುವ ಅಕ್ಷಯ ದೇವಾಡಿಗ ಅವರ ವಿರುದ್ಧ ಕ್ರಮ ಜರುಗಿಸಿ, ತಮಗೆ ಹಾಗೂ ತನ್ನ ತಂದೆಗೆ ರಕ್ಷಣೆ ನೀಡಿ’ ಎಂದವರು ಮನವಿ ಮಾಡಿದ್ದಾರೆ. ನ್ಯಾಯಾಲಯ ನೀಡಿದ ಸೂಚನೆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನಿನ ಪ್ರಕಾರ ಕ್ರಮ ಜರುಗಿಸಿದ್ದಾರೆ.