ಶಿರಸಿ ಬಸ್ ನಿಲ್ದಾಣಕ್ಕೆ ಬರುವ ಮಹಿಳಾ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರದ ಮಾದೇವಿ ನಾಯ್ಕ ಅವರ ಚಿನ್ನ ಕದ್ದ ಜ್ಯೋತಿ ಎಂಬಾತರು ಈ ಹಿಂದೆಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅವರ ತಂಡದಲ್ಲಿದ್ದ ಸುಶೀಲಾ ಹಾಗೂ ಸಾಯಿಲಕ್ಷಿ ಎಂಬಾತರು ಇದೀಗ ಸಿಕ್ಕಿ ಬಿದ್ದಿದ್ದಾರೆ.
ಹೊನ್ನಾವರ ಇಡಗುಂಜಿ ಬಳಕೂರಿನ ಹಾಮಾಕ್ಕಿ ನಿವಾಸಿ ಮಾದೇವಿ ರಾಮಚಂದ್ರ ನಾಯ್ಕ ಅವರು ಮೇ 19ರಂದು ಶಿರಸಿಗೆ ಬಂದಿದ್ದರು. ಆ ದಿನ ಮಧ್ಯಾಹ್ನ 2.15ಕ್ಕೆ ಚಂದ್ರಗುತ್ತಿ-ಹರೀಶಿ ಮಾರ್ಗದ ಬಸ್ ಬಂದಿದ್ದು, ಆ ಬಸ್ಸಿನ ತುಂಬ ಜನರಿದ್ದರು. ಜೊತೆಗೆ, ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಜನರು ಆ ಬಸ್ಸು ಹತ್ತಲು ಒಮ್ಮೆಲೆ ಬಂದಿದ್ದರಿoದ ಅಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಮಾದೇವಿ ನಾಯ್ಕ ಅವರ ಜೊತೆ ಅವರ ಪುತ್ರ ದಿಗಂತ, ಅತ್ತೆ ಪಾರ್ವತಿ ಹಾಗೂ ಇನ್ನಿತರ ಸಂಬoಧಿಕರು ಬಸ್ಸಿನ ಬಳಿ ಓಡಿ ಸೀಟು ಹಿಡಿಯುವ ಪ್ರಯತ್ನ ಮಾಡುವ ವೇಳೆ ಅವರ ಬಳಿಯಿದ್ದ ಚಿನ್ನ ಕಳ್ಳತನವಾಗಿತ್ತು.
ಜೂನ್ 3ರಂದು ಸಹ ಮತ್ತೊಬ್ಬರ ಮಹಿಳೆಯ ಚಿನ್ನ ಕಾಣೆಯಾಗಿತ್ತು. ಈ ಎರಡು ಕೇಸು ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಬೆಂಗಳೂರಿನ ಜ್ಯೋತಿ (ಸಂಜನಾ) ವೆಂಕಟೇಶ್ ಪುಸುಪಲೇಟ್ (32) ಅವರು ಸಿಕ್ಕಿಬಿದ್ದಿದ್ದರು. ಇದೇ ಪ್ರಕರಣದ ಮುಂದುವರೆದ ಭಾಗವಾಗಿ ಪೊಲೀಸರು ಸದ್ಯ ಶಿವಮೊಗ್ಗದ ಸುಶೀಲಾ ಸುರೇಶ ಹಾಗೂ ದಾವಣಗೆರೆಯ ಸಾಯಿಲಕ್ಷಿ ಪ್ರಭುದಾಸ ಎಂಬಾತರನ್ನು ಬಂಧಿಸಿದ್ದಾರೆ. ಅವರಿಂದ 5 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಸಹ ಜಪ್ತು ಮಾಡಿದ್ದಾರೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಪೊಲೀಸ್ ನಿರೀಕ್ಷಕ ಸಂಪತ್ ಈ ಸಿ ಅವರ ಜೊತೆ ಪಿಸೈ ನರಸಿವಂಹಲು, ನಾರಾಯಣ ರಾತೋಡ್ ಅವರ ಜೊತೆ ಸಿಬ್ಬಂದಿ ಬಸವರಾಜ ಹಗೇರಿ, ಕೋಟೇಶ್ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಸದ್ದಾಂ ಹುಸೇನ್, ಚನ್ನಬಸಪ್ಪ ಕೆ, ರಾಜು ಎಂ, ತುಕಾರಾಮ ಬಣಗಾರ, ಸುನೀಲ, ಪ್ರಶಾಂತ, ಶಂಕರಮ್ಮ ಅವರು ಆರೋಪಿಯನ್ನು ಬಂಧಿಸಿದರು. ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ ಹಾಗೂ ಬಬನ ಕದಂ ಈ ಕಾರ್ಯಾಚರಣೆಗೆ ನೆರವು ನೀಡಿದ್ದಾರೆ.