ಬಿಹಾರದಿಂದ ಕಾರವಾರಕ್ಕೆ ಬಂದು ಕನ್ನಡ ಕಲಿತು ಶೈಕ್ಷಣಿಕವಾಗಿಯೂ ಸಾಧನೆ ಮಾಡಿದ ಸತ್ಯಕುಮಾರ್ ಪಾಸ್ವಾನ ಅವರಿಗೆ ಓಎಸ್‌ಜಿ ಗ್ರೂಪಿನವರು ಸೈಕಲ್ ತೆಗಿಸಿಕೊಟ್ಟಿದ್ದಾರೆ. ಕಷ್ಟದ ನಡುವೆಯೂ ಕಲಿಯುತ್ತಿರುವ ಸತ್ಯಕುಮಾರ ಅವರ ಶಿಕ್ಷಣಕ್ಕೆ ಗ್ರೂಪಿನ ಅಧ್ಯಕ್ಷ ಪವನ್ ಸಾವಂತ ಅವರು ಪ್ರೋತ್ಸಾಹಕರಾಗಿದ್ದಾರೆ.
ಸತ್ಯಕುಮಾರ್ ಪಾಸ್ವಾನ ಅವರ ತಂದೆ ಕೂಲಿಗಾಗಿ ಬಿಹಾರದ ಸಮಸ್ತಿಪುರದಿಂದ ಕಾರವಾರಕ್ಕೆ ಬಂದಿದ್ದರು. ತಮ್ಮ ಮಗನನ್ನು ಅವರು ಅಸ್ನೋಟಿ ಶಿವಾಜಿ ಮಂದಿರಕ್ಕೆ ದಾಖಲಿಸಿದ್ದರು. ಸದ್ಯ ಅಲ್ಲಿ 8ನೇ ತರಗತಿ ಕಲಿಯುತ್ತಿರುವ ಸತ್ಯಕುಮಾರ ಅವರಿಗೆ ಸೈಕಲ್ ಮೇಲೆ ವಿಪರೀತ ವ್ಯಾಮೋಹ. ಇದನ್ನು ಅರಿತ ಇಂಜಿನಿಯರ್ ಪವನ್ ಸಾವಂತ ಅವರು `ಚನ್ನಾಗಿ ಓದಿದರೆ ಸೈಕಲ್ ಕೊಡಿಸುವೆ’ ಎಂದಿದ್ದರು. ಸತ್ಯಕುಮಾರ ಅವರು ಕನ್ನಡ ಕಲಿತು, ಕನ್ನಡ ಭಾಷೆಯಲ್ಲಿಯೇ ಶೈಕ್ಷಣಿಕ ಸಾಧನೆ ಮಾಡುತ್ತಿರುವುದನ್ನು ನೋಡಿದ ಅವರು ತಾವು ಕೊಟ್ಟ ಮಾತು ಉಳಿಸಿಕೊಂಡರು.
`ಭಾಷೆ ಬೇರೆಯಾದರೂ ಕನಸು ಒಂದೇ. ಶ್ರಮವಿದ್ದರೆ ಎಲ್ಲವೂ ಸಾಧ್ಯ’ ಎಂದು ಈ ವೇಳೆ ಓಎಸ್‌ಜಿ ಗ್ರೂಪ್ ಅಧ್ಯಕ್ಷ ಪವನ್ ಸಾವಂತ ಅವರು ಹೇಳಿದರು. ಗ್ರೂಪ್ ಕಾರ್ಯದರ್ಶಿ ಎನ್ ಜಿ ನಾಯ್ಕ ಅವರು `ಸೈಕಲ್ ಎಂದರೆ ಕೇವಲ ವಾಹನವಲ್ಲ. ಅದು ಶಿಕ್ಷಣದ ಕಡೆಗೆ ಹೋಗುವ ಸೇತುವೆ’ ಎಂದು ಬಣ್ಣಿಸಿದರು. ಪ್ರಮುಖರಾದ ಚಂದ್ರಕಾAತ ಪೆಡ್ನೇಕರ ಶಾಲಾ ಮುಖ್ಯೋಪಾಧ್ಯಾಂಪಕ ಗಣೇಶ ಬಿಷ್ಟಣ್ಣನವರ, ಸಂತೋಷ ಪಾಸ್ವಾನ ಅವರು ಇದ್ದರು.