ಬನವಾಸಿ ಬಳಿಯ ನರೂರಿನ ಭರತ ನಾಯ್ಕ ಅವರು ಕಲಕರಡಿಯ ನಾಗರಾಜ ನಾಯ್ಕ ಅವರ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಡುವುದಾಗಿ ಹೇಳಿ ಹಣಪಡೆದಿದ್ದು, ಸೂಕ್ತ ಸೇವೆ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದ ಕಾರಣ ಭರತ ನಾಯ್ಕ ಅವರು ನಾಗರಾಜ ನಾಯ್ಕ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಶಿರಸಿಯ ಬನವಾಸಿ ಬಳಿಯ ಕಲಕರಡಿಯಲ್ಲಿ ನಾಗರಾಜ ಮಂಜಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ರೈತರಾಗಿ ಅವರು ತಮ್ಮ ಬದುಕು ಕಟ್ಟಿಕೊಂಡಿದ್ದು, ಎರಡು ವರ್ಷದ ಹಿಂದೆ ಮನೆಗೆ ಸಿಸಿ ಕ್ಯಾಮರಾ ಹಾಕಲು ನಿರ್ಧರಿಸಿದ್ದಾರೆ. ಈ ಬಗ್ಗೆ ಹುಡುಕಾಟ ನಡೆಸಿದಾಗ ಅವರಿಗೆ ನರೂರಿನ ಭರತ ಭೀಮಾ ನಾಯ್ಕ ಅವರ ಪರಿಚಯವಾಗಿದೆ. ನಯವಾಗಿ ಮಾತನಾಡಿದ ಭರತ ನಾಯ್ಕ ಅವರು 8 ಸಿಸಿ ಕ್ಯಾಮರಾ ಅಳವಡಿಸಲು 42 ಸಾವಿರ ರೂ ಹಣಪಡೆದಿದ್ದಾರೆ. ಪಡೆದ ಹಣಕ್ಕೆ ಭರತ ನಾಯ್ಕ ಅವರು ಸಿಸಿ ಕ್ಯಾಮರಾವನ್ನು ಅಳವಡಿಸಿದ್ದಾರೆ. ಆದರೆ, ಆ ಕ್ಯಾಮರಾದ ಬಿಲ್ ಹಾಗೂ ವಾರಂಟಿ ಕಾರ್ಡ ಮಾತ್ರ ಕೊಟ್ಟಿಲ್ಲ.
ನಾಗರಾಜ ನಾಯ್ಕ ಅವರು ಪ್ರಶ್ನಿಸಿದಾಗಲೆಲ್ಲ `ನಾಳೆ ಕೊಡುವೆ’ ಎನ್ನುತ್ತಲೇ ಭರತ ನಾಯ್ಕ ಅವರು ಕಾಲ ಕಳೆದಿದ್ದಾರೆ. ಎರಡು ತಿಂಗಳ ಹಿಂದೆ ಆ ಸಿಸಿ ಕ್ಯಾಮರಾ, ಡಿವಿಆರ್ ಹಾಗೂ ರೂಟರ್ ಹಾಳಾಗಿದ್ದು, ಆಗಲೂ ನಾಗರಾಜ ನಾಯ್ಕ ಅವರು ವಾರಂಟಿ ಬಗ್ಗೆ ಪ್ರಶ್ನಿಸಿದ್ದಾರೆ. `ರಿಪೇರಿ ಮಾಡಿ ಕೊಡುವೆ’ ಎಂದು ಸಿಸಿ ಕ್ಯಾಮರಾ ಹಾಗೂ ಇನ್ನಿತರ ಸಾಮಗ್ರಿ ತೆಗೆದುಕೊಂಡು ಹೋದ ಭರತ ನಾಯ್ಕ ಅವರು ಈವರೆಗೂ ಅದನ್ನು ಮರಳಿಸಿಲ್ಲ. ಈ ಬಗ್ಗೆ ನಾಗರಾಜ ನಾಯ್ಕ ಅವರು ಫೋನ್ ಮಾಡಿದಾಗ `ಅದನ್ನು ಕೊಡುವುದಿಲ್ಲ’ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಈ ಎಲ್ಲದರ ನಡುವೆ ನಾಗರಾಜ ನಾಯ್ಕ ಅವರು ಅಗಸ್ಟ 6ರಂದು ಪ್ರಸನ್ನಕುಮಾರ ಈರಪ್ಪ ನಾಯ್ಕ ಅವರ ಜೊತೆ ಶಿವಮೊಗ್ಗದಿಂದ ಬರುವಾಗ ಭರತ ನಾಯ್ಕ ಅವರು ಎದುರಾಗಿದ್ದಾರೆ. ಆ ವೇಳೆ ನಾಗರಾಜ ನಾಯ್ಕ ಅವರು ಸಿಸಿ ಕ್ಯಾಮರಾ ಬಗ್ಗೆ ಪ್ರಶ್ನಿಸಿದ್ದು, `ಅದಕ್ಕೆ ಬಿಲ್ ಇಲ್ಲ. ರಿಪೇರಿ ಆಗುವುದಿಲ್ಲ’ ಎಂದಿದ್ದಾರೆ. ಜೋರು ಮಾಡಿದಾಗ ನಾಗರಾಜ ನಾಯ್ಕ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ, ಪ್ರಸನ್ನಕುಮಾರ ನಾಯ್ಕ ಅವರು ಆ ಹೊಡೆದಾಟ ತಪ್ಪಿಸಿದ್ದಾರೆ. ಖರೀದಿ ನಂತರ ಸೂಕ್ತ ಬಿಲ್ ಪಡೆಯದ ಕಾರಣ ನಾಗರಾಜ ನಾಯ್ಕ ಅವರಿಗೆ ಅನ್ಯಾಯವಾಗಿದೆ.
`ಯಾವುದೇ ವಸ್ತು ಖರೀದಿಸಿದರೂ ಬಿಲ್ ಕೇಳಿಪಡೆಯಿರಿ’