ಚಾಮರಾಜನಗರದ ಹನೂರಿನಲ್ಲಿ ರೈತರ ಮೇಲೆ ಗುಂಡು ಹಾರಿಸಲಾಗಿದ್ದು, ಕರ್ನಾಟಕ ಪ್ರಾಂತ ರೈತ ಸಂಘ ಉತ್ತರ ಕನ್ನಡ ಜಿಲ್ಲಾ ಸಮಿತಿ ಇದನ್ನು ಖಂಡಿಸಿದೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಮಿತಿ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಆಗ್ರಹಿಸಿದ್ದಾರೆ.
`ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನ ಅನಾಧಿಕಾಲದಿಂದ ಅರಣ್ಯ ರಕ್ಷಣೆ ಮಾಡುತ್ತ ಬಂದಿದ್ದಾರೆ. ಅವರು ಅನಧಿಕೃತವಾಗಿ ಕಾಡು ಪ್ರವೇಶಿಸಿದರು ಎಂಬ ಕಾರಣಕ್ಕೆ ಗುಂಡು ಹೊಡೆದಿರುವುದು ಸರಿಯಲ್ಲ. ಹನೂರು ತಾಲೂಕಿನ ಮರಿಮಂಗಳ ಅರಣ್ಯ ಬೀಟ್ ನಲ್ಲಿ ಕಾಡಂಚಿನ ಗ್ರಾಮದ ತೋಮಿಯಾರ್ ಪಾಳ್ಯದ ಮೂವರು ರೈತರನ್ನು ಗುಂಡುಹೊಡೆದು ಕೊಂದಿರುವುದು ಶೋಚನೀಯ’ ಎಂದವರು ಹೇಳಿದ್ದಾರೆ. `ಕಾಡಂಚಿನಲ್ಲಿ ವಾಸಿಸುವ ಬುಡಕಟ್ಟು ಮತ್ತು ಇತರೆ ಜನ ನಿತ್ಯ ದಬ್ಬಾಳಿಕೆಗೆ ಒಳಗಾಗುತ್ತಿದ್ದು, ಈ ಘಟನೆಯೂ ಅದಕ್ಕೆ ಒಂದು ನಿದರ್ಶನ’ ಎಂದಿದ್ದಾರೆ.
`ರಾಜ್ಯ ಸರಕಾರ ತನ್ನ ಅಧೀನದ ಕಂದಾಯ ಅಧಿಕಾರಿಗಳ ನೇತೃತ್ವದ ಮ್ಯಾಜೆಸ್ಟ್ರೇಟ್ ತನಿಖೆಗೆ ಚಿಂತಿಸಿದ್ದು, ಅದನ್ನು ಕೂಡಲೇ ಹಿಂಪಡೆದು ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗದ ಸ್ವತಂತ್ರ ತನಿಖೆಗೆ ಅಗತ್ಯ ಕ್ರಮವಹಿಸಬೇಕು. ಕೊಲೆಯಾದವರ ಕುಟುಂಬಕ್ಕೆ ಕನಿಷ್ಟ 5ಕೋಟಿ ರೂ ಪರಿಹಾರ ಕೊಡಬೇಕು. ಇಂಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿರುವಂತೆ ಕೊಲೆ ಮೊಕದ್ದಮೆ ದಾಖಲಿಸಿ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಕಾಮ್ರೇಡ್ ಡಿ ರವೀಂದ್ರನ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ ಯಶವಂತ ಟಿ ನೇತೃತ್ವದಲ್ಲಿ ರೈತ ಸಂಘದ ಉನ್ನತ ಮಟ್ಟದ ನಿಯೋಗ ಮೃತ ರೈತ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ವ್ಯಕ್ತಪಡಿಸಲಾಗಿದೆ. ಈ ಘಟನೆಯ ಬಗ್ಗೆ ನ್ಯಾಯ ಒದಗಿಸಲು ಕೋರಿ ರೈತ ಸಂಘ ಹೋರಾಟ ನಡೆಸುವುದಾಗಿಯೂ ಶಾಂತರಾಮ ನಾಯಕ ಅವರು ತಿಳಿಸಿದ್ದಾರೆ.