ಕಾರವಾರದ ಅಂಬೇಡ್ಕರ್ ವೃತ್ತದ ಸಮೀಪದ ತಾಜ್ ಫಾಸ್ಟ್‌ಫುಡ್ ಸೆಂಟರ್‌ನಲ್ಲಿ ಎಲ್‌ಪಿಜಿ ಸೋರಿಕೆಯಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಕಾರವಾರ ನಗರದಲ್ಲಿ ಮಂಗಳವಾರ ಸಂಭವಿದಿದೆ.
ಬೆಂಕಿಯ ತೀವ್ರತೆಗೆ ಅಡುಗೆ ಕೋಣೆಯಲ್ಲಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳು ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಫಾಸ್ಟ್‌ಫುಡ್ ಸೆಂಟರ್‌ನ ಅಡುಗೆ ಕೋಣೆಯಲ್ಲಿ ಎಲ್‌ಪಿಜಿ ಸೋರಿಕೆಯಾದ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು ಅಡುಗೆ ಕೋಣೆಯನ್ನು ಆವರಿಸಿದ್ದರಿಂದ ಸಿಬ್ಬಂದಿ ಹಾಗೂ ಸುತ್ತಮುತ್ತಲಿದ್ದವರು ಆತಂಕಕ್ಕೊಳಗಾದರು. ಜನನಿಬಿಡ ಪ್ರದೇಶವಾಗಿರುವುದರಿಂದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸುವ ಆತಂಕವಿತ್ತು.
ಘಟನೆಯ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ತ್ವರಿತವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಸುತ್ತಮುತ್ತಲಿನ ಕಟ್ಟಡಗಳಿಗೆ ಬೆಂಕಿ ಹರಡುವುದನ್ನು ತಡೆದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್‌ಪಿಜಿ ಸೋರಿಕೆಯೇ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ಹಾಗೂ ಆಸ್ತಿ ನಷ್ಟದ ಕುರಿತು ಪರಿಶೀಲನೆ ಮುಂದುವರಿದಿದೆ