`ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸುವ ವಿಷಯವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ತಕರಾರು ಸಲ್ಲಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ಸಮಿತಿ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಅಭಿಪ್ರಾಯ ಮಂಡಿಸಿದ್ದು, `ಪಶ್ಚಿಮಘಟ್ಟದಲ್ಲಿ ವಾಸಿಸುವ ಜನ-ಜೀವನದ ಮೇಲೆ ಈ ವರದಿ ದುಷ್ಪರಿಣಾಮ ಬೀರಲಿದೆ’ ಎಂದು ಆತಂಕವ್ಯಕ್ತಪಡಿಸಿದ್ದಾರೆ.
`ಕಸ್ತೂರಿ ರಂಗನ್ ವರದಿಗೆ ಸಂಬoಧಿಸಿದoತೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಕರ್ನಾಟಕ ಸರ್ಕಾರ ಕೇಂದ್ರದ ಪ್ರಸ್ತಾವನೆಗಳಿಗೆ ತಕರಾರು ಸಲ್ಲಿಸಿತ್ತು. ಇದೇ ನಿಲುವನ್ನು ಮುಂದುವರಿಸಿ, ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಕರಡು ಅಧಿಸೂಚನೆಗೂ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು 2013ರಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ವರದಿ ಸಲ್ಲಿಸಿತ್ತು. ವರದಿಯಲ್ಲಿ ದೇಶದ ಆರು ರಾಜ್ಯಗಳ ಸುಮಾರು 56000 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಶಿಫಾರಸು ಮಾಡಲಾಗಿದ್ದು, ಕರ್ನಾಟಕದ 20,668 ಚದರ ಕಿಮೀ ಪ್ರದೇಶ ಇದರಲ್ಲಿ ಸೇರಿದೆ. ಕೇಂದ್ರ ಸರ್ಕಾರವು 2026ರ ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯಡಿ ಕರ್ನಾಟಕದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ ಸೇರಿದಂತೆ 10 ಜಿಲ್ಲೆಗಳ 39 ತಾಲ್ಲೂಕುಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಲು ಗುರುತಿಸಲಾಗಿದೆ’ ಎಂದವರು ವಿವರಿಸಿದ್ದಾರೆ.
`ಕರಡು ಅಧಿಸೂಚನೆಯಡಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕಟ್ಟಡ ಮತ್ತು ಟೌನ್‌ಶಿಪ್ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ. ಕೃಷಿ, ನೆಡುತೋಪು ಸೇರಿದಂತೆ ಜನರ ದೈನಂದಿನ ಜೀವನಾಧಾರ ಚಟುವಟಿಕೆಗಳ ಮೇಲೆ ನಿರ್ದಿಷ್ಟ ಪರಿಣಾಮ ಬೀರಲಿದೆ. ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದರಿಂದ ಈಗಾಗಲೇ ರಕ್ಷಿತ ಪ್ರದೇಶಗಳು, ಅಧಿಸೂಚಿತ ಅರಣ್ಯಗಳು ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲ್ಪಟ್ಟಿರುವ ಪ್ರದೇಶಗಳ ಮೇಲೆ ಹೆಚ್ಚುವರಿ ನಿರ್ಬಂಧಗಳು ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಪಶ್ಚಿಮಘಟ್ಟದ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಬೀರುವ ಲಕ್ಷಣಗಳಿವೆ’ ಎಂದವರು ಹೇಳಿದ್ದಾರೆ.
`ಈ ಎಲ್ಲಾ ಹಿನ್ನೆಲೆಯಲ್ಲಿ ಜುಲೈ 27ರಂದು ಹೊರಡಿಸಿದ ಏಳನೆಯ ಪ್ರಸ್ತಾವನೆಯನ್ನು ತಿರಸ್ಕರಿಸಲು 60 ದಿನದ ಅವಕಾಶವಿದೆ. ರಾಜ್ಯ ಸರಕಾರ ಆದಷ್ಟು ಬೇಗ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಸ್ಪಷ್ಟ ನಿಲುವನ್ನು ತಿಳಿಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುವುದಾಗಿ ಶಾಂತಾರಾಮ ನಾಯಕ ಅವರು ಆಗ್ರಹಿಸಿದ್ದಾರೆ.