`ಓದಿ ಸಾಧನೆ ಮಾಡು’ ಎಂದು ಅಪ್ಪ-ಅಮ್ಮ ದುಡ್ಡು ಕೊಟ್ಟು ಮಗನನ್ನು ಕಾಲೇಜಿಗೆ ಕಳುಹಿಸಿದ್ದು, ಕಾರ್ತಿಕ್ ಹಾಗೂ ಪ್ರಜ್ವಲ್ ಸೇರಿ ಆ ದುಡ್ಡನ್ನು ದುಶ್ಚಟಕ್ಕೆ ಬಳಸಿದ್ದಾರೆ. ಮೋಜು-ಮಸ್ತಿಗಾಗಿ ಅವರಿಬ್ಬರು ಮಾದಕ ವ್ಯಸನ ಸೇವಿಸಿ ಸಿಕ್ಕಿಬಿದ್ದಿದ್ದಾರೆ.
ದಾಂಡೇಲಿ ಟೌನ್‌ಶಿಪ್’ನ ಕಾರ್ತಿಕ್ ಚಂದ್ರಶೇಖರ್ ಟಿ (20) ಹಾಗೂ ಅಂಬೇವಾಡಿಯ ಪ್ರಜ್ವಲ್ ಬಸವರಾಜ ಗೌಡ (18) ಅವರು ಆತ್ಮೀಯ ಸ್ನೇಹಿತರಾಗಿದ್ದು, ಅವರಿಬ್ಬರು ಒಟ್ಟಿಗೆ ಗಾಂಜಾ ಹೊಡೆದಿದ್ದಾರೆ. ಮಾರುತಿ ನಗರದ ಅಂಬೇಡ್ಕರ್ ಶಾಲೆಯ ಬಳಿ ಅಮಲಿನಲ್ಲಿದ್ದ ಅವರಿಬ್ಬರನ್ನು ಪೊಲೀಸರು ಹಿಡಿದು ನಶೆ ಇಳಿಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದನ್ನು ಅವರಿಬ್ಬರು ಒಪ್ಪಿಕೊಂಡಿದ್ದು, `ಮಾದಕ ವ್ಯಸನಗಳಿಂದ ವಿದ್ಯಾರ್ಥಿಗಳು ಹಾಳಾಗಬಾರದು’ ಎಂದು ಅರಿವು ಮೂಡಿಸುವುದಕ್ಕಾಗಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಅಗಸ್ಟ 20ರಂದು ದಾಂಡೇಲಿ ಪಿಸೈ ಕಿರಣ ಪಾಟೀಲ್ ಅವರು ತಮ್ಮ ಜೀಪಿನಲ್ಲಿ ಸಂಚರಿಸುತ್ತಿದ್ದರು. ಪೊಲೀಸ್ ಸಿಬ್ಬಂದಿ ಬಸವರಾಜ ತೆಲಸಂಗ, ಕೃಷ್ಣಪ್ಪ ಬೆಳವರಿ ಅವರು ಆ ಜೀಪಿನಲ್ಲಿದ್ದರು. ಆ ಜೀಪನ್ನು ಸುನೀಲ್ ಅವರು ಚಲಾಯಿಸುತ್ತಿದ್ದು, ಎಲ್ಲರೂ ಸೇರಿ ಮಾರುತಿ ನಗರದ ಅಂಬೇಡ್ಕರ್ ಶಾಲೆಯ ಬಳಿ ಹೋಗಿದ್ದರು. ಅಲ್ಲಿ ಕಾರ್ತಿಕ್ ಹಾಗೂ ಪ್ರಜ್ವಲ್ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಪೊಲೀಸರು ನೋಡಿದರು. ಅವರಿಬ್ಬರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ನಿಲ್ಲಲು ಸಹ ಆಗುತ್ತಿರಲಿಲ್ಲ. ಪ್ರಶ್ನಿಸಿದಾಗ ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಕೂಡಲೇ ಅವರಿಬ್ಬರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು.
ವೈದ್ಯಕೀಯ ವರದಿಯಲ್ಲಿ ಸಹ ಅವರಿಬ್ಬರು ಮಾದಕ ವ್ಯಸನ ಸೇವಿಸಿದ್ದು ದೃಢವಾಯಿತು. ಈ ಹಿನ್ನಲೆ ಅವರಿಬ್ಬರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’