RTI ಅಡಿ ಸಲ್ಲಿಸಿದ ಅರ್ಜಿಗೆ ದಾಖಲೆ ಒದಗಿಸದೇ 36 ರೂ ಹಣ ಪಾವತಿಸುವಂತೆ ಸೂಚಿಸಿದ ಕಾರಣ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ತಕರಾರು ಸಲ್ಲಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರಿಗೆ 100 ಪುಟ ಉಚಿತವಾಗಿ ಕೊಡದೇ ಹಣ ಪಾವತಿಸಲು ಸೂಚಿಸಿದ ಕಾರಣ ಅವರು ಸಿಡಿಮಿಡಿಗೊಂಡಿದ್ದಾರೆ.
ಕುಮಟಾ ಜನತಾ ಪ್ಲೋಟಿನ ಆಗ್ನೇಲ್ ರೋಡ್ರಿಗಿಸ್ ಅವರು ಕುಮಟಾ ತಹಶೀಲ್ದರ್ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸೆ 20ರಂದು ಅವರು ಸಲ್ಲಿಸಿದ ಅರ್ಜಿಯಲ್ಲಿ `ಇಂದಿರಾ ಗಾಂಧಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳ ಕಡತ’ ನೀಡುವಂತೆ ಕೋರಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಹಿಂಬರಹ ನೀಡಿದ್ದು, `18 ಪುಟಗಳ ಕಡತಕ್ಕೆ 36ರೂ ಹೆಚ್ಚುವರಿಯಾಗಿ ಪಾವತಿಸಬೇಕು’ ಎಂದು ಸೂಚಿಸಿದ್ದಾರೆ.
`ಅರ್ಜಿ ಜೊತೆ 10ರೂ ಮೌಲ್ಯದ ಪೋಸ್ಟಲ್ ಆರ್ಡರ್ ಹಾಗೂ ಪಡಿತರ ಚೀಟಿ ಲಗತ್ತಿಸಿದರೂ ಹೆಚ್ಚುವರಿ ಹಣ ಕೇಳಲಾಗಿದೆ’ ಎಂಬುದು ಅರ್ಜಿದಾರ ಆಗ್ನೆಲ್ ರೋಡಿಗ್ರಸ್ ಅವರ ಆರೋಪ. ಮಾಹಿತಿ ನೀಡದ ಅಧಿಕಾರಿಗೆ ದಂಡ ವಿಧಿಸಲು ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಆಗ್ನೇಲ್ ರೋಡಿಗ್ರಸ್ ಹೇಳಿದ್ದಾರೆ.