ಅಂಕೋಲಾದ ಪುರಲಕ್ಕಿ-ಬೇಣದಲ್ಲಿನ `ನಮ್ಮ ಕ್ಲಿನಿಕ್’ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೇಖಾ ಬೂದಿಹಾಳ ಅವರನ್ನು ಅಲ್ಲಿನ ಕರ್ತವ್ಯದಿಂದ ತೆಗೆಯಲಾಗಿದೆ. ಕ್ಲಿನಿಕ್’ಗೆ ಬರುವ ರೋಗಿಗಳ ಜೊತೆ ಸಿಡುಕು ಸ್ವಭಾವದಿಂದ ಮಾತನಾಡುತ್ತಿದ್ದ ಕಾರಣ ಅವರ ವಿರುದ್ಧ ಈ ಕ್ರಮವಾಗಿದೆ.
ಅಂಕೋಲಾದ ಪುರಲಕ್ಕಿ-ಬೇಣದಲ್ಲಿನ `ನಮ್ಮ ಕ್ಲಿನಿಕ್’ನ ಆರೋಗ್ಯ ಸೇವೆಗಳು ಹದಗೆಡುತ್ತಿರುವ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕನ ಮೊಬೈಲ್ ಟೈಂ.ಇನ್ ವರದಿ ಪ್ರಸಾರ ಮಾಡಿತ್ತು. ಸಾರ್ವಜನಿಕ ದೂರಿನ ಅನ್ವಯ ಈ ವರದಿ ಪ್ರಸಾರವಾಗಿದ್ದು, `ಇಲ್ಲಿ ಕೆಲಸ ಮಾಡುವ ಶುಶ್ರೂಷಕಿ ರೇಖಾ ಬೂದಿಹಾಳ ಅವರನ್ನು ಬೇರೆಡೆ ವರ್ಗಾಯಿಸಬೇಕು’ ಎಂದು 30ಕ್ಕೂ ಅಧಿಕ ಜನ ಪತ್ರದ ಮೂಲಕ ಆಗ್ರಹಿಸಿದ್ದರು.
ಇದನ್ನೂ ಓದಿ: ಸಿಡುಕು ಸ್ವಭಾವದ ಶುಶ್ರೂಷಕಿ!
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರಿಗೆ ಸಹ ಪುರಮಕ್ಕಿ-ಬೇಣದ ಜನ ಪತ್ರ ರವಾನಿಸಿದ್ದರು. ನಮ್ಮ ಕ್ಲಿನಿಕ್ ಕೇಂದ್ರದಲ್ಲಿ ಶುಶ್ರೂಷಕಿಯಾಗಿರುವ ರೇಖಾ ಬೂದಿಹಾಳ ಅವರ ವರ್ತನೆ ವಿರುದ್ಧ ಅಲ್ಲಿನವರು ಅಸಮಧಾನವ್ಯಕ್ತಪಡಿಸಿದ್ದರು. ಇಲ್ಲಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ರೇಖಾ ಬೂದಿಹಾಳ ಅವರು ನಿತ್ಯ ತಕರಾರು ಮಾಡುತ್ತಿದ್ದು, ಅವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಿ’ ಎಂದು ಆಗ್ರಹಿಸಿದ್ದರು. `ರೇಖಾ ಬೂದಿಹಾಳ ಅವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಸಿಡುಕು ಸ್ವಭಾವದ ಅವರು ಜನರಿಗೆ ನಿತ್ಯ ಬೈಯುತ್ತಾರೆ. ಈ ಹಿಂದೆ ಇದ್ದ ವೈದ್ಯರಿಗೂ ಸಮಸ್ಯೆ ಮಾಡಿ, ಅವರನ್ನು ಓಡಿಸಿದ್ದಾರೆ. ವೈದ್ಯರು ಬರೆದ ಔಷಧಿ ಬದಲು ಬೇರೆ ಔಷಧಿ ನೀಡುತ್ತಾರೆ’ ಎಂದು ದೂರಿದ್ದರು.
ಈ ಎಲ್ಲಾ ಹಿನ್ನಲೆ ಅಂಕೋಲಾ ತಾಲೂಕು ಆರೋಗ್ಯಾಧಿಕಾರಿಗಳು ಅವರನ್ನು ಇಲ್ಲಿನ ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಕಡತಗಳ ವಿಲೇವಾರಿ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ.