ಅನೇಕ ಬಗೆಯ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಇದೀಗ ಅರಣ್ಯ ಅತಿಕ್ರಮಣದಾರರ ಪರ ಹೋರಾಟ ಶುರು ಮಾಡಿದ್ದಾರೆ. ಮೊನ್ನೆ ಶಿರಸಿಯ ಗೋಳಿಕಟ್ಟಾದಲ್ಲಿನ ಅರಣ್ಯ ಅತಿಕ್ರಮಣ ತೆರವು ಪ್ರದೇಶಕ್ಕೆ ದೌಡಾಯಿಸಿದ್ದ ಅವರು ಈ ದಿನ ಯಲ್ಲಾಪುರದ ಕುಂದರಗಿಗೆ ಆಗಮಿಸಿ ಅಲ್ಲಿ ಅಡಿಕೆ ಮರ ಕಡಿದ ಕ್ರಮವನ್ನು ಖಂಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಪರ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಕಳೆದ 35 ವರ್ಷಗಳಿಂದ ಹೋರಾಡುತ್ತಿದ್ದಾರೆ. ಅವರೊಂದಿಗೆ ಹೊನ್ನಾವರದ ಚಂದ್ರಕಾoತ ಕೋಚ್ರೇಕರ್, ಅಂಕೋಲಾದ ಶಾಂತರಾಮ ನಾಯಕ ಸೇರಿ ಅನೇಕರು ಅರಣ್ಯ ಅತಿಕ್ರಮಣದಾರರ ಪರ ಧ್ವನಿಯಾಗಿದ್ದಾರೆ. ಈ ನಡುವೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಇದಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಹಸಿರು ಶಾಲು ಹೊದ್ದ ಅನಂತಮೂರ್ತಿ ಹೆಗಡೆ ಅವರು ಅರಣ್ಯ ಅತಿಕ್ರಮಣದಾರರನ್ನು ಭೇಟಿ ಮಾಡಿ, ಅವರ ಕಷ್ಟ ಆಲಿಸುತ್ತಿದ್ದಾರೆ.
ಯಲ್ಲಾಪುರದ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ ಅವರ ತೋಟಕ್ಕೆ ಹೋದ ಅನಂತಮೂರ್ತಿ ಹೆಗಡೆ ಅವರು `ಅಡಿಕೆ ಮರವನ್ನು ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಇಲ್ಲ’ ಎಂದು ಹೇಳಿದ್ದಾರೆ. `ಮರ ಕಡಿಯುವ ನಿಯಮ ಎಲ್ಲಿದೆ?’ ಎಂದವರು ಪ್ರಶ್ನಿಸಿದ್ದಾರೆ. `ಸದಾಶಿವ ನಾಯ್ಕ ಅವರು ಕೂಲಿ ಕೆಲಸಕ್ಕೆ ಹೋದಾಗ ಅಲ್ಲಿದ್ದ ಏಳು ವರ್ಷದ ಗಿಡಗಳನ್ನು ಅರಣ್ಯ ಸಿಬ್ಬಂದಿ ಕಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರ ಬಗ್ಗೆ ಕನಿಕರವಿವರಬೇಕು’ ಎಂದು ಹೇಳಿದ್ದಾರೆ.
ಯಲ್ಲಾಪುರ ಬಿಜೆಪಿ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ , ಮಾಳಕೊಪ್ಪ ಮಂಚಿಕೇರಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್, ಪ್ರಮುಖರಾದ ಬಾಬಣ್ಣ ಪತ್ರಕರ್, ರಾಮಕೃಷ್ಣ ಹೆಗಡೆ, ಸೀತಾರಾಮ್ ಗೌಡ, ಗಂಗಾಧರ ನಾಯಕ್ ಅವರು ಈ ವೇಳೆ ಅಲ್ಲಿ ಸೇರಿ ಆಕ್ರೋಶವ್ಯಕ್ತಪಡಿಸಿದ್ದಾರೆ.