ಚಾಲಕನಿಲ್ಲದೇ ಚಲಿಸಿದ ಡಂಪರ್ ಟಿಪ್ಪರ್ ಹಟ್ಟಿಕೇರಿಯ ಮಾರುತಿ ನಾಯ್ಕ ಅವರಿಗೆ ಡಿಕ್ಕಿ ಹೊಡೆದಿದ್ದು, ಮಾರುತಿ ನಾಯ್ಕ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಕ್ರಷರ್ ಬಳಿ ಬೋಡ್ರಸ್ ಅನಲೋಡ್ ಮಾಡಲು ನಿಲ್ಲಿಸಿದ್ದ ಡಂಪರ್ ಟಿಪ್ಪರ್ ಇಳಿಜಾರಿನಲ್ಲಿ ಚಲಿಸಿ ಚಾಲಕ ಮಾರುತಿ ನಾಯ್ಕ ಅವರ ಪ್ರಾಣ ತೆಗೆದಿದೆ.
ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಮಾರುತಿ ರಾಮಚಂದ್ರ ನಾಯ್ಕ ಅವರು ವಾಸವಾಗಿದ್ದರು. 51 ವರ್ಷದ ಅವರು ಅಂಕೋಲಾದ ರಾಜು ಕಳಸ್ ಅವರ ಡಂಪರ್ ವಾಹನಕ್ಕೆ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಅಗಸ್ಟ 25ರ ಸಂಜೆ 5ಗಂಟೆಯ ವೇಳೆಗೆ ಡಂಪರ್‌ನಲ್ಲಿ ಬೋಡ್ರಸ್ ತುಂಬಿಕೊAಡು ರಾಜು ಕಳಸ್ ಅವರ ಕ್ರಷರ್‌ಗೆ ತೆರಳಿದ್ದರು. ಕ್ರಷರ್‌ನಲ್ಲಿ ಬೋಡ್ರಸ್ ಅನಲೋಡ್ ಮಾಡಲು ವಾಹನವನ್ನು ಕ್ರಷರ್ ಮಷೀನ್‌ನ ಮೇಲ್ಭಾಗಕ್ಕೆ ಕೊಂಡೊಯ್ದು ನಿಲ್ಲಿಸಲಾಗಿತ್ತು.
ಆದರೆ ಬೋಡ್ರಸ್ ಅನಲೋಡ್ ಮಾಡುವ ಸ್ಥಳವನ್ನು ಸಮತಟ್ಟು ಮಾಡದಿರುವ ಕಾರಣ ಡಂಪರ್ ಇಳಿಚಾರಿನಲ್ಲಿ ಚಲಿಸಿತು. ವಾಹನದ ಮುಂದೆ ನಿಂತಿದ್ದ ಮಾರುತಿ ನಾಯ್ಕ ಅವರಿಗೆ ಡಂಪರ್ ಗುದ್ದಿತು. ಮಾರುತಿ ನಾಯ್ಕ ಅವರು ಇಳಿಜಾರಿನ ರಸ್ತೆಯಲ್ಲಿ ಡಂಪರ್ ನಿಲ್ಲಿಸಿ ಬೋಡ್ರಸ್ ಅನಲೋಡ್ ಮಾಡಿದ ಬಳಿಕ ವಾಹನದಿಂದ ಕೆಳಗಿಳಿದು ಅದರ ಮುಂಭಾಗದಲ್ಲಿ ನಿಂತಿದ್ದು, ಅದೇ ಡಂಪರ್ ಅಡಿಗೆ ಬಿದ್ದು ಅವರು ಸಾವನಪ್ಪಿದರು. ಈ ಅವಘಡದ ಬಗ್ಗೆ ಜಗದೀಶ ಗೋವಿಂದ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.