ಗಣಪತಿ ಮಂಟಪ ತರಲು ಕಾಳಿ ನದಿ ದಾಟಿ ಹೋಗಿದ್ದ ಬಾಳಸು ಆಚಾರಿ ಅವರು ಮರಳಿ ಬರುವಾಗ ದೋಣಿ ಮುಗುಚಿ ಬಿದ್ದಿದ್ದು, ಏಳು ತಾಸಿನ ನಂತರ ಅವರು ಶವವಾಗಿ ಸಿಕ್ಕಿದ್ದಾರೆ. ದುರಂತದ ನಂತರ ನಿರಂತರ ಶೋಧ ಕಾರ್ಯಾಚರಣೆ ನಡೆಸಿದರೂ ಬಾಳಸು ಆಚಾರಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಕಾರವಾರದ ಸಿದ್ದರದಲ್ಲಿ ಬಾಳಸು ಆಚಾರಿ ಅವರು ವಾಸವಾಗಿದ್ದರು. ಗಣೇಶ ಉತ್ಸವದ ಅಂಗವಾಗಿ ಅವರು ಕಾಳಿ ನದಿ ದಾಟಿ ಮಂಟಪ ತರಲು ನಿರ್ಧರಿಸಿದ್ದರು. ಅದಕ್ಕಾಗಿ ಭಾನುವಾರ ಅವರು ದೋಣಿ ಮೂಲಕ ಉಳಗಾಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಅವರ ದೋಣಿ ಅವಘಡಕ್ಕೀಡಾಗಿದ್ದು, ಬಾಳಸು ಆಚಾರಿ ಅವರು ನೀರು ಪಾಲಾಗಿದ್ದರು. ರಾತ್ರಿಯಿಡೀ ಅವರ ಶೋಧ ನಡೆದರೂ ಪ್ರಯೋಜನವಾಗಿಲ್ಲ. ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಜೊತೆ ಅಗ್ನಿಶಾಮಕ ಸಿಬ್ಬಂದಿ ಸಹ ಹುಡುಕಾಟ ನಡೆಸಿದರೂ ಯಾವ ಸುಳಿವು ಸಿಕ್ಕಿರಲಿಲ್ಲ.
ಕಾಳಿ ನದಿಯ ಎರಡೂ ದಡಗಳಲ್ಲಿ ಸುಮಾರು ಮೂರು ಕಿಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಅವರು ಪತ್ತೆ ಆಗಲಿಲ್ಲ. ದೋಣಿ ಮುಳುಗಿದ ಸ್ಥಳದ 100 ಮೀ ಆಳದವರೆಗೆ ಗಮನಿಸಿದರೂ ಬಾಳಸು ಆಚಾರಿ ಅವರು ಎಲ್ಲಿ ಹೋದರು? ಎಂದು ಕಾಣಲಿಲ್ಲ. ಸತತ ಶೋಧ ಮುಂದುವರೆದಿದ್ದು ಸೋಮವಾರ ಬೆಳಗ್ಗೆ ಹಳಗಾ ದೋಳ್ ಬಳಿ ಶವ ಸಿಕ್ಕಿತು. ಆ ಶವ ಬಾಳಸು ಆಚಾರಿ ಅವರದ್ದೇ ಎಂದು ಖಚಿತವಾಯಿತು.