ಆರೋಗ್ಯವಾಗಿಯೇ ಇದ್ದ ಅಂಕೋಲಾದ ಅನಿತಾ ಆಚಾರಿ ಅವರ ಮಗು ದಿಢೀರ್ ಆಗಿ ಭ್ರೂಣದಲ್ಲಿರುವಾಗಲೇ ಸಾವನಪ್ಪಿದೆ. ಎಲ್ಲವೂ ಸರಿಯಾಗಿದ್ದರೂ ಮಗು ಸಾವನಪ್ಪಿರುವುದು ಹೇಗೆ? ಎನ್ನುವುದರ ಬಗ್ಗೆ ಜಿಲ್ಲಾಡಳಿತ ತನಿಖೆ ಶುರು ಮಾಡಿದೆ. ಈ ಎಲ್ಲದರ ನಡುವೆ ಗರ್ಭಿಣಿಯ ಚೀಲದಲ್ಲಿ Misoprostol 200mg ಎಂಬ ಔಷಧಿಯೊಂದು ಸಿಕ್ಕಿದೆ.
ಅಂಕೋಲಾದ ಅನಿತಾ ನಂದು ಆಚಾರಿ ಅವರಿಗೆ 27 ವರ್ಷ. ಅವರು ಇದೇ ಮೊದಲ ಬಾರಿ ಗರ್ಭಿಣಿಯಾಗಿದ್ದರು. ಅವರು ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ತಪಾಸಣೆಗೆ ಒಳಪಡುತ್ತಿದ್ದರು. ವೈದ್ಯರು ನೀಡಿದ ಔಷಧಿ ಹಾಗೂ ಸಲಹೆಗಳನ್ನು ಅವರು ತಪ್ಪದೇ ಪಾಲಿಸುತ್ತಿದ್ದರು. ಮಗುವಿನ ಬೆಳವಣಿಗೆಯಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಸ್ಕಾನಿಂಗ್ ಅವಧಿಯಲ್ಲಿಯೂ ಸಮಸ್ಯೆ ಕಾಣಿಸಿರಲಿಲ್ಲ. ಹೀಗಿರುವಾಗ ಅನಿತಾ ಆಚಾರಿ ಅವರಿಗೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಅನುಮಾನ ಕಾಡಿತು. ಆಗ ಅವರು ಮತ್ತೆ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ ಎಲ್ಲವೂ ಸರಿಯಾಗಿದೆ ಎಂದೇ ವರದಿ ಬಂದಿತು. ಅದಾದ ನಂತರ ಅನಿತಾ ಆಚಾರಿ ಅವರು ಖಾಸಗಿ ಕೇಂದ್ರಕ್ಕೆ ತೆರಳಿ ತಪಾಸಣೆ ನಡೆಸಿದಾಗ ಮಗುವಿಗೆ ಹೃದಯ ಬಡಿತವೇ ಇಲ್ಲದಿರುವುದು ಗೊತ್ತಾಯಿತು.
ಅನಿತಾ ಆಚಾರಿ ಅವರು ಪಡೆಯುತ್ತಿದ್ದ ಔಷಧಿಗಳ ಚೀಟಿ ನೋಡಿದಾಗ ಅಲ್ಲಿ Misoprostol 200mg ಎಂಬ ಔಷಧಿಯೊಂದು ಕಾಣಿಸಿತು. ಆ ಔಷಧಿ ಅತ್ಯಂತ ಅನುಮಾನಾಸ್ಪದವಾಗಿದ್ದು, ಅದನ್ನು ಯಾವ ವೈದ್ಯರು ನೀಡಿದ್ದಾರೆ? ಎಂದು ಮಾತ್ರ ಗೊತ್ತಾಗಲಿಲ್ಲ. ಯಾವ ವೈದ್ಯರ ಶಿಫಾರಸ್ಸಿನ ಮೇರೆಗೆ ಆ ಔಷಧಿ ನೀಡಲಾಗಿದೆ? ಯಾವ ಸಮಯದಲ್ಲಿ ಅದನ್ನು ಕೊಡಲಾಗಿದೆ? ಎಂದು ತನಿಖೆಯಾಗಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಕುರಿತು ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಹಿಂದಿನ ವೈದ್ಯಕೀಯ ದಾಖಲೆ, ಗರ್ಭಿಣಿಗೆ ನೀಡಿದ ಔಷಧಿ, ಮಗುವಿನ ಕುರಿತಾದ ಸ್ಕಾನಿಂಗ್ ವರದಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತನಿಖಾ ತಂಡದವರು ಮಾಹಿತಿ ಸಂಗ್ರಹಿಸಿದ್ದಾರೆ. ವೈದ್ಯಕೀಯ ಸಂಸ್ಥೆಯವರು ಭ್ರೂಣದ ಆರೋಗ್ಯದ ಬಗ್ಗೆ ಸೂಕ್ತ ತಪಾಸಣೆ ನಡೆಸದೇ ವಾರದ ನಂತರ ಮತ್ತೆ ಬನ್ನಿ ಎಂದು ಗರ್ಭಿಣಿಯನ್ನು ಕಳುಹಿಸಿರುವ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯ ಅನಿತಾ ಆಚಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಈ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಸೂಚಿಸಿದ್ದು, ಜಿಲ್ಲಾ ವೈದ್ಯಾಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿ ಡಾ ನಟರಾಜ್ ಅವರು ಮಹಿಳೆಯನ್ನು ಭೇಟಿ ಮಾಡಿ ವಿವರ ಸಂಗ್ರಹಿಸಿದ್ದಾರೆ. ಮಹಿಳೆ ಹೇಳಿದ ಹೇಳಿಕೆಯನ್ನು ಅವರು ದಾಖಲಿಸಿಕೊಂಡಿದ್ದಾರೆ. `ವೈದ್ಯರಿಂದ ತಪ್ಪಾಗಿದ್ದರೆ ಶಿಕ್ಷೆ ಕೊಡಬೇಕು. ಮತ್ತೆ ಇಂಥ ವಿದ್ಯಮಾನ ಮರುಕಳಿಸದ ಹಾಗೇ ನೋಡಿಕೊಳ್ಳಬೇಕು’ ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ.
`ವೈದ್ಯರ ಸೂಚನೆಗಳಿಲ್ಲದೇ ಯಾವ ಔಷಧಿಯನ್ನೂ ಸೇವಿಸದಿರಿ’