ನದಿ ತಿರುವು ಯೋಜನೆ ವಿರುದ್ಧ ಉತ್ತರ ಕನ್ನಡದಲ್ಲಿ ದೊಡ್ಡ ಜನಾಂದೋಲನ ನಡೆದಿದ್ದು, ಕಾರವಾರದಲ್ಲಿ ನಡೆದ ಪ್ರತಿಭಟನೆಯೇ ಅದಕ್ಕೆ ಸಾಕ್ಷಿಯಾಗಿದೆ. ಸಾವಿರಾರು ಸಂಖ್ಯೆಯ ಜನ ನದಿ ತಿರುವು ಯೋಜನೆ ವಿರೋಧಿಸಿ ಗುರುವಾರ ಡೀಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
`ನದಿ ತಿರುವು ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಹಾಗೂ ನದಿಕಣಿವೆಗಳ ಪರಿಸರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ’ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ. 12 ತಾಲೂಕಿನ ವಿವಿಧ ಸಮುದಾಯ-ಸಂಘಟನೆಗಳ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಈ ಜನಸ್ತೋಮ ನೋಡಿ ರಾಜಕೀಯ ನಾಯಕರು ಸ್ಥಳಕ್ಕೆ ದೌಡಾಯಿಸಿದ್ದು, ಯೋಜನೆ ವಿರೋಧಿಸಿ ಭಾಷಣ ಮಾಡಿದ್ದಾರೆ.
`ಪ್ರಸ್ತಾಪಿತ ನದಿ ಜೋಡಣೆ ಯೋಜನೆಗಳ ಅನುಷ್ಠಾನಕ್ಕಾಗಿ ಅಣೆಕಟ್ಟು, ಕಾಲುವೆ, ಸುರಂಗ, ಪೈಪ್‌ಲೈನ್, ಪಂಪ್‌ಹೌಸ್, ವಿದ್ಯುತ್ ಪ್ರಸರಣ ಮಾರ್ಗ ಹಾಗೂ ಸೇವಾ ರಸ್ತೆಗಳಂತಹ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ಪಶ್ಚಿಮಘಟ್ಟದ ಗುಡ್ಡ ಪ್ರದೇಶಗಳಲ್ಲಿ ವ್ಯಾಪಕವಾಗಿ ಭೂ ಅಗೆತ ಹಾಗೂ ಅರಣ್ಯ ನಾಶ ಸಂಭವಿಸುವ ಆತಂಕವಿದೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. `ಬೇಡ್ತಿ ನದಿ ಕಣಿವೆಯಲ್ಲಿ ಹೆಚ್ಚಿನ ಮಳೆ ಕೇವಲ ಮಳೆಗಾಲದ ಕೆಲ ತಿಂಗಳಲ್ಲಿ ಸುರಿಯುವುದರಿಂದ ಉಳಿದ ಅವಧಿಯಲ್ಲಿ ನದಿಯ ಹರಿವು ಕಡಿಮೆಯಾಗಿರುತ್ತದೆ. ಹೀಗಾಗಿ ನದಿಯಲ್ಲಿ ಹೆಚ್ಚುವರಿ ನೀರು ಲಭ್ಯವಿದೆ ಎಂಬ ಪರಿಕಲ್ಪನೆಯೇ ವಾಸ್ತವಿಕವಲ್ಲ’ ಎಂದು ತಜ್ಞರು ವಿವರಿಸಿದ್ದಾರೆ. `ನದಿ ಜೋಡಣೆ ಕಾಮಗಾರಿಗಳಿಂದ ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಹಾನಿಯಾಗುವುದರ ಜೊತೆಗೆ ವನ್ಯಜೀವಿಗಳ ಆವಾಸಸ್ಥಾನ ವಿಭಜನೆಯಾಗುವ ಸಾಧ್ಯತೆಯಿದೆ. ಇದರಿಂದ ಮಾನವ – ವನ್ಯಜೀವಿ ಸಂಘರ್ಷ ಹೆಚ್ಚಾಗಲಿದ್ದು, ಗುಡ್ಡ ಪ್ರದೇಶಗಳಲ್ಲಿ ಭೂಕುಸಿತದ ಅಪಾಯವೂ ಇದೆ’ ಎಂದಿದ್ದಾರೆ.
`ಬೇಡ್ತಿ ಮತ್ತು ಅಘನಾಶಿನಿ ನದಿಗಳ ಮೇಲೆ ಅವಲಂಬಿತವಾಗಿರುವ ರೈತರು, ಸಣ್ಣ ಕೃಷಿಕರು, ಪಶುಪಾಲಕರು, ಅರಣ್ಯಾಧಾರಿತ ಸಮುದಾಯಗಳು ಹಾಗೂ ಕರಾವಳಿ ಭಾಗದ ಮೀನುಗಾರರ ಜೀವನೋಪಾಯಕ್ಕೂ ಯೋಜನೆ ಅಪಾಯಕಾರಿಯಾಗಲಿದೆ’ ಎಂದು ಪ್ರತಿಭಟನಾಕಾರರು ಆತಂಕವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ನದಿಗಳ ಸಿಹಿನೀರಿನ ಹರಿವು ಕಡಿಮೆಯಾದರೆ ಸಮುದ್ರದ ಉಪ್ಪುನೀರು ನದಿಮುಖ ಪ್ರದೇಶಗಳಿಗೆ ಒಳನುಗ್ಗುವ ಸಾಧ್ಯತೆ ಇದ್ದು, ಕುಡಿಯುವ ನೀರು, ಕೃಷಿ ಹಾಗೂ ಮೀನುಗಾರಿಕೆ ಮೇಲೆ ಪರಿಣಾಮ ಬೀರಲಿದೆ’ ಎಂಬ ಅಂಶದ ಬಗ್ಗೆ ಗಮನಸೆಳೆದಿದ್ದಾರೆ.