ಶಿರಸಿಯಿoದ ಕಾರವಾರ ಹಾಗೂ ಕುಮಟಾದಿಂದ ಭಟ್ಕಳದವರೆಗೆ ಪಾದಯಾತ್ರೆ ಮಾಡಿ ಅನುಭವವಿರುವ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು `ಬಳ್ಳಾರಿ ಚಲೋ’ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಕಿಂಚಿತ್ತು ದಣಿವಾರಿಸಿಕೊಳ್ಳದೇ 24ಕಿಮೀ ದೂರ ಅವರು ನಡೆದಿದ್ದಾರೆ.
ಅನಂತಮೂರ್ತಿ ಹೆಗಡೆ ಅವರಿಗೆ ಹೋರಾಟ-ಪಾದಯಾತ್ರೆಗಳು ಹೊಸದಲ್ಲ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಅವರು ಹೋರಾಟ ನಡೆಸಿದ್ದು, ಶಿರಸಿಯಿಂದ ಕಾರವಾರದವರೆಗೆ ನಡೆದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಾದ ನಂತರ ಮಂಕಾಳು ವೈದ್ಯ ಅವರ ಆಡಳಿತ ವಿರೋಧಿಸಿ ಕುಮಟಾದಿಂದ ಭಟ್ಕಳದವರೆಗೂ ನಡಿಗೆ ಮಾಡಿದ್ದರು. ಸದ್ಯ ಬಿಜೆಪಿಯೇ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕುವುದಕ್ಕಾಗಿ `ಬಳ್ಳಾರಿ ಚಲೋ’ ಆಯೋಜಿಸಿದ್ದು, ಅನಂತಮೂರ್ತಿ ಹೆಗಡೆ ಅವರು ಸಹ ಅದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ.
ಈ ಹೋರಾಟದಲ್ಲಿ ಅನಂತಮೂರ್ತಿ ಹೆಗಡೆ ಅವರ ಜೊತೆ ಬಿಜೆಪಿ ರೈತಮೋರ್ಚಾ ಪದಾಧಿಕಾರಿಗಳು ಹೆಜ್ಜೆ ಹಾಕಿದ್ದಾರೆ. ಗುರುವಾರ ಅವರೆಲ್ಲರೂ ರಾಯಚೂರು ಜಿಲ್ಲೆಯ ಮಸ್ಕಿ ಗುಡದೂರು ಗ್ರಾಮದಿಂದ ಸಿಂಧನೂರುವರೆಗೆ ನಡೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, `ಕರ್ನಾಟಕದಲ್ಲಿ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತೇಸಬೇಕಿದೆ’ ಎಂದು ಭಾಷಣ ಮಾಡಿದ್ದಾರೆ. ಬಿಜೆಪಿ ರೈತ ಮೋರ್ಚಾದ ಪ್ರಮುಖರಾದ ಶಿವಕುಮಾರ್ ನಾಯ್ಕ್ ಕೊಂಡ್ಲಿ , ಬಸಣ್ಣ ಕುರುಬ ಕಟ್ಟಿ ಇತರರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.