ಜೊಯಿಡಾದ ಪ್ರಧಾನಿಯಲ್ಲಿ ಗ್ರಾಮ ಪಂಚಾಯತ ಅಧೀನದಲ್ಲಿದ್ದ ಕಟ್ಟಡದ ಮೇಲ್ಚಾವಣಿ ತೆಗೆದ ಗ್ರಾ ಪಂ ಅಧ್ಯಕ್ಷ ಶಾಂತಾರಾಮ ಅವರು ಅದನ್ನು ತಮ್ಮ ಮನೆಗೆ ಹೊದಿಕೆ ಮಾಡಿಕೊಂಡಿದ್ದಾರೆ. ಮೇಲ್ಚಾವಣಿ ತೆಗೆಯುವ ಮುನ್ನ ಅವರು ಸಂಬoಧಿಸಿದ ಪ್ರಾಧಿಕಾರದ ಅನುಮತಿಯನ್ನು ಸಹ ಪಡೆದಿಲ್ಲ!
ಪ್ರಧಾನಿ ಗ್ರಾಮ ಪಂಚಾಯತ ಸಮೀಪ ಕೆಲ ವಾಣಿಜ್ಯ ಮಳಿಗೆಗಳಿದ್ದವು. ಆ ಮಳಿಗೆಗಳನ್ನು ಗ್ರಾಮ ಪಂಚಾಯತವೇ ನಿರ್ವಹಣೆ ಮಾಡುತ್ತಿತ್ತು. ಆದರೆ, ಮಂಗಳವಾರ ಮಧ್ಯಾಹ್ನ ಆ ಕಟ್ಟಡದ ಮೇಲೆ ಗ್ರಾಮ ಪಂಚಾಯತ ಅಧ್ಯಕ್ಷರ ಕೆಟ್ಟ ದೃಷ್ಠಿ ಬಿದ್ದಿತು. ದಿಢೀರ್ ಆಗಿ ಕಟ್ಟಡದ ಛಾವಣಿಗಳನ್ನು ತೆರವು ಮಾಡಿದ ಅವರು ಅದನ್ನು ತಮ್ಮ ಮನೆಗೆ ಹೊದಸಿದರು. ಬೆಳಗ್ಗೆ ಸರಿಯಾಗಿದ್ದ ಕಟ್ಟಡ ಸಂಜೆ ವೇಳೆ ಬೋಳಾಗಿದ್ದು ನೋಡಿ ಜನ ಅಚ್ಚರಿಗೆ ಒಳಗಾದರು.
ಕಳೆದ ಒಂದು ವರ್ಷದ ಹಿಂದೆ ಗ್ರಾಮ ಪಂಚಾಯತ ಮೂಲಕವೇ ಆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣದ ಮಾತುಕಥೆ ನಡೆದಿತ್ತು. ಈ ಬಗ್ಗೆ ಗ್ರಾಮ ಪಂಚಾಯತ ನಿರ್ಧಾರವನ್ನು ಪ್ರಕಟಿಸಿತ್ತು. ಆದರೆ, ಕಟ್ಟಡ ತೆರವಿಗೆ ಯಾರಿಗೂ ಜವಾಬ್ದಾರಿ ನೀಡಿರಲಿಲ್ಲ. ಕಾನೂನಾತ್ಮಕವಾಗಿ ಹರಾಜು ಪ್ರಕ್ರಿಯೆ ಸಹ ನಡೆದಿರಲಿಲ್ಲ.
ಈ ನಡುವೆಯೇ ಗ್ರಾ ಪಂ ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ವಾಣಿಜ್ಯ ಮಳಿಗೆಗೆ ಕೈ ಹಾಕಿದ್ದಾರೆ. ಕಟ್ಟಡದ ಮೇಲ್ಚಾವಣಿ ತುಂಡರಿಸಿ ಅದನ್ನು ಮನೆಗೆ ಒಯ್ದಿದ್ದಾರೆ. ಕುಡಿಯುವ ನೀರು ಸೇರಿ ಇನ್ನಿತರ ವಿಷಯದಲ್ಲಿಯೂ ಗ್ರಾ ಪಂ ಅಧ್ಯಕ್ಷರ ಹಸ್ತಕ್ಷೇಪ ಜೋರಾಗಿದ್ದು, ಅವರ ನಡೆಗೆ ಅಲ್ಲಿನ ಜನ ಅಸಮಧಾನವ್ಯಕ್ತಪಡಿಸಿದ್ದಾರೆ.